ಬಹುತೇಕ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ಸರ್ಕಾರ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯಾಧಿಕಾರಿಗಳ ಸಂಘ ಇಂದಿನಿಂದ ಮಾಡಲುದ್ದೇಶೀಸಿದ್ದ ಮುಷ್ಕರವನ್ನು ಹಿಂಪಡೆದುಕೊಂಡಿದೆ. ಖಾಲಿ ಹುದ್ದೆಗಳ ಭರ್ತಿ ಸೇರಿ 14 ಬೇಡಿಕೆಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಒಪಿಡಿ ಬಂದ್ ಮಾಡಿ ಸರ್ಕಾರಿ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದರು. ಇದರಿಂದ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಉಂಟಾಗಬಹುದು ಎಂದು ಎಚ್ಚೆತ್ತ ರಾಜ್ಯ ಸರ್ಕಾರ, ವೈದ್ಯಾಧಿಕಾರಿಗಳ ಸಂಘದ ಜತೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. 14 ಬೇಡಿಕೆಗಳ ಪೈಕಿ 13 ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನಿಡಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 11ರ ಮುಷ್ಕರವನ್ನು ವೈದ್ಯಾಧಿಕಾರಿಗಳ ಸಂಘ ವಾಪಸ್ ಪಡೆದುಕೊಂಡಿದೆ.
ಸಂಧಾನ ಸಭೆಯಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಇಟ್ಟಿರುವ 14 ಬೇಡಿಕೆಗಳ ಪೈಕಿ 13 ಬೇಡಿಕೆ ಈಡೇರಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಮುಂದಿನ 3 ತಿಂಗಳಲ್ಲಿ ಎಲ್ಲ ಬೇಡಿಕೆ ಈಡೇರಿಸುವುದಾಗಿ ತಿಳಿಸಿದೆ. ಸರ್ಕಾರದ ಈ ಭರವಸೆಗೆ ವೈದ್ಯಾಧಿಕಾರಿಗಳ ಸಂಘ ಒಪ್ಪಿಕೊಂಡು ಮುಷ್ಕರ ಹಿಂಪಡೆದುಕೊಂಡಿದೆ. ಇದರಿಂದ ರೋಗಿಗಳು ನಿಟ್ಟುಸಿರುಬಿಡುವಂತಾಗಿದೆ.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಿಎಂ ಸೂಚನೆ ಮೇರೆಗೆ ವೈದ್ಯಾಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದೇವೆ. CNR ಮಾಡುತ್ತೇವೆ ಎಂದು ಹೇಳಿದ್ದೇವೆ. ಜ್ಯೇಷ್ಠತಾ ಪಟ್ಟಿಯೂ ರೆಡಿ ಇದೆ. ಪಿಜಿ ಕೋರ್ಸ್ ಮಾಡಿ ಎಂದು ಹೇಳಿದ್ದರು ಅದಕ್ಕೂ ಒಪ್ಪಿದ್ದೇವೆ. ಉಳಿದಂತೆ ಹಲವು ವಿಚಾರಗಳನ್ನು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ಔಷಧಿಗಳ ಖರೀದಿಗೆ ಹಣ ಕೊಟ್ಟಿದ್ದೇವೆ. ಔಷಧಿಗಳು ನಮ್ಮ ಕಡೆಯಿಂದ ಸರಬರಾಜು ಆಗುತ್ತಿದೆ. ಔಷಧಿ ಎಲ್ಲಿಂದ ಬರುತ್ತದೆ ಎನ್ನುವುದು ಮುಖ್ಯ ಅಲ್ಲ. ಜನರಿಗೆ ಔಷಧಿ ಸಿಗಬೇಕು, ಎಲ್ಲದಕ್ಕೂ ಅವರೂ ಒಪ್ಪಿದ್ದಾರೆ. ಬಹುತೇಕ ಎಲ್ಲ ಬೇಡಿಕೆ ಈಡೇರಿಸುವುದರ ಬಗ್ಗೆ ಮಾತನಾಡಿದ್ದೇವೆ ಎಂದು ಹೇಳಿದರು.
























