ಕಡಬ: ತಾಲೂಕಿನ ರಾಮಕುಂಜದಲ್ಲಿ ಬಾವಿ ನೋಡುವ ಸಮಯದಲ್ಲಿ ವ್ಯಕ್ತಿಯೊಬ್ಬರು ಸ್ಪೋಟಕಗಳನ್ನು ಬಳಕೆ ಮಾಡಿದ್ದು, ಇದರಿಂದ ನೆರೆಕರೆಯ ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೈಸೂರು ನಿವಾಸಿ ಸೋಮಶೇಖರ್ ಎಂಬವರು 23 ಸೆಂಟ್ಸ್ ಭೂಮಿ ಖರೀದಿ ಮಾಡಿದ್ದರು. ಅದರಲ್ಲಿರುವ ಅಡಿಕೆ ಮರಗಳಿಗೆ ನೀರಿನ ಅವಶ್ಯಕತೆ ಪೂರೈಸಲು ಬಾವಿ ತೋಡಿಸುತ್ತಿದ್ದರು. ಈ ವೇಳೆ ಸುಮಾರು 15 ಅಡಿ ಆಳದಲ್ಲಿ ಕಲ್ಲು ಸಿಕ್ಕಿದ್ದು, ಅದನ್ನು ಒಡೆಯುವ ನಿಟ್ಟಿನಲ್ಲಿ ಸ್ಪೋಟಕಗಳನ್ನು ಬಳಕೆ ಮಾಡಿದ್ದರು.
ಮಾ. 8 ರಂದು ಅವರು ಸ್ಪೋಟಕಗಳನ್ನು ಸ್ಪೋಟಿಸಿದ ಪರಿಣಾಮ ಸಮೀಪದ ವಾಮನ ಮೂಲ್ಯ ಮತ್ತು ಕೆ. ಟಿ. ಮೋಹನ್ ಎಂಬ ವರ ಮನೆಯ ಗೋಡೆಗಳಿಗೆ ಹಾನಿಯಾಗಿ, ಬಿರುಕು ಬಿಟ್ಟಿವೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗೆಯೇ ಬಾವಿಯಲ್ಲಿ ಸ್ಪೋಟವಾಗದೇ ಉಳಿದಿರುವ ಸ್ಪೋಟಕಗಳನ್ನು ನಿಷ್ಟ್ರಿಯಗೊಳಿಸಲು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ.
























