ಶ್ರೀಮಂತರನ್ನು ಹನಿಟ್ರ್ಯಾಪ್ ಮಾಡಿ ದೋಚುತ್ತಿದ್ದ ಕಿಲಾಡಿ ಲೇಡಿ ಪೊಲೀಸರ ಬಲೆಗೆ

ಬೆಳಗಾವಿ: ಶ್ರೀಮಂತ ಪುರುಷರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡಿ ಅವರನ್ನು ದೋಚುತ್ತಿದ್ದ ಖತರ್‌ನಾಕ್ ಲೇಡಿಯನ್ನು ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ.

ಫ್ಯಾಶನ್ ಡಿಸೈನರ್ ದೀಪಾ ಎಂಬಾಕೆಯೇ ಬಂಧಿತ ಆರೋಪಿ. ಆಕೆಗೆ ಈ ಕೆಲಸಕ್ಕೆ ಸಹಾಯ ಮಾಡುತ್ತಿದ್ದ ಆಕೆಯ ಸ್ನೇಹಿತ ಶಿವಾನಂದ ಮಠಪತಿ ಪರಾರಿಯಾಗಿದ್ದಾನೆ.

ಆರೋಪಿ ಶಿವಾನಂದನೇ ದೀಪಾಳಿಗೆ ಶ್ರೀಮಂತ ವ್ಯಕ್ತಿಗಳ ಮಾಹಿತಿ ನೀಡುತ್ತಿದ್ದ. ಆ‌ ವ್ಯಕ್ತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಆಕೆ, ಬಳಿಕ ಅವರ ಜೊತೆ ಸಲುಗೆಯಿಂದ, ಆಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ವಶ ಮಾಡಿಕೊಳ್ಳುತ್ತಿದ್ದಳು.





















































 
 

ನಂತರ ಅವರನ್ನು ಬೆಳಗಾವಿಯ ಲಾಡ್ಜ್‌ಗೆ ಬರಲು ಹೇಳಿ, ಅವರನ್ನು ಸ್ನಾನಕ್ಕೆ ‌ಕಳುಹಿಸಿ ಅವರನ್ನು ಅಲ್ಲೇ ಲಾಕ್ ಮಾಡುತ್ತಿದ್ದಳು‌. ಬಳಿಕ ಅವರಿಂದ ಹಣ, ಮೊಬೈಲ್ ಫೋನ್, ಕಾರಿನ ಕೀ ಸೇರಿದಂತೆ ಎಲ್ಲಾ ರೀತಿಯ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದಳು. ಆ ಬಳಿಕ ಬಾತ್‌ರೂಮ್‌ನಲ್ಲಿ ಲಾಕ್ ಆದ ವ್ಯಕ್ತಿಗೆ ಬೇರೆ ಬೇರೆ ನಂಬರ್‌ನಿಂದ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಕೊಡದೇ ಹೋದಲ್ಲಿ ಕೇಸು ದಾಖಲಿಸುವ ಬೆದರಿಕೆ ಹಾಕುತ್ತಿದ್ದಳು ಎಂದು ತಿಳಿದು ಬಂದಿದೆ.

ಆರೋಪಿ ದೀಪಾವಳಿ ಕಳ್ಳಾಟ ಲಾಡ್ಜ್‌ನ ಸಿಸಿ‌ಟಿವಿ ಕೆಮರಾದಲ್ಲಿ ಸೆರೆಯಾಗಿದೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ ಒಟ್ಟು 32 ಲಕ್ಷ 86 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ ಒಂದು ಫಾರ್ಚುನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, ಮೂರು ಕಾರಿನ ಕೀಗಳು ಹಾಗೂ 14 ಸಾವಿರ ರೂ. ನಗದು ಸೇರಿವೆ.

ಆರೋಪಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.

error: Content is protected !!
Scroll to Top