ಚಿಕ್ಕಬಳ್ಳಾಪುರ: ಸ್ನೇಹಿತೆಯ ಪ್ರಿಯಕರನ ಕರೆಯನ್ನು ಸ್ವೀಕರಿಸಿ ಮಾತನಾಡಿದ ಕಾರಣಕ್ಕೆ ಗಂಡ ಮತ್ತು ಹೆಂಡತಿಯ ನಡುವೆ ಜಗಳವಾಗಿದ್ದು, ಪತ್ನಿ ಶವವಾಗಿ ಪತ್ತೆಯಾದ ಘಟನೆ ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವರಲಕ್ಷ್ಮೀ(25) ಎಂಬಾಕೆಯೇ ಮೃತ ದುರ್ದೈವಿ.
ವರಲಕ್ಷ್ಮೀ ತಮ್ಮ ಸ್ನೇಹಿತೆಯ ಬಾಯ್‌ಫ್ರೆಂಡ್ ಮಾಡಿದ್ದ ಕರೆಯನ್ನು ಸ್ವೀಕರಿಸಿ ಮಾತನಾಡಿದ್ದಳು. ಇದಕ್ಕೆ ಆಕೆಯ ಗಂಡ ಗಂಗರಾಜು ಆಕ್ಷೇಪ ವ್ಯಕ್ತಪಡಿಸಿ, ಪ್ರೇಮಿಗಳ ಮಧ್ಯೆ ಹೋಗದಂತೆ, ಮಧ್ಯಸ್ಥಿಕೆ ವಹಿಸದಂತೆ ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ವಿಷಯದಲ್ಲಿ ಪತಿ ಪತ್ನಿ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಮಟ್ಟದ ಜಗಳ ನಡೆದಿದೆ.
ಆ ಬಳಿಕ ವರಲಕ್ಷ್ಮೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತಳ ಕುಟುಂಬಸ್ಥರು ಆಕೆಯನ್ನು ಗಂಗರಾಜು ಹತ್ಯೆ ಮಾಡಿದ್ದಾಗಿ ಆರೋಪಿಸಿದ್ದಾರೆ. ಗಂಡ, ಅತ್ತೆ ಮತ್ತು ಮಾವನ ವಿರುದ್ಧ ಕೊಲೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
























