ಸಹಪಾಠಿಗಳು, ವಾರ್ಡನ್ ಮೇಲೆ ಹಲ್ಲೆ ಮಾಡಿದ್ದ 9ನೇ ತರಗತಿ ವಿದ್ಯಾರ್ಥಿ
ಬಳ್ಳಾರಿ: ಜಿಲ್ಲೆಯ ಗೋನಾಳ ಪ್ರದೇಶದ ವಸತಿ ಶಾಲೆಯಲ್ಲಿ ಸಹಪಾಠಿ ವಿದ್ಯಾರ್ಥಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದು ಹಾಸ್ಟೆಲ್ ವಾರ್ಡನ್ ಮತ್ತು ಇತರ ಏಳು ವಿದ್ಯಾರ್ಥಿಗಲ ಮೇಲೆ ಹಲ್ಲೆ ಮಾಡಿ ಓಡಿಹೋಗಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಈ ಅಪ್ರಾಪ್ತ ವಯಸ್ಸಿನವನನ್ನು ಬಳ್ಳಾರಿ ನಗರದ ಶ್ರೀರಾಮಪುರ ಕಾಲೊನಿಯ ರೂಪನಗುಡಿಯಲ್ಲಿ ಸೋಮವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಹೊರವಲಯದ ತಾಳೂರು ರಸ್ತೆಯಲ್ಲಿರುವ ‘ಗುರುಕುಲ ಕಾನ್ಸೆಪ್ಟ್ ಸ್ಕೂಲ್’ ಎಂಬ ಸಿಬಿಎಸ್ ಶಾಲೆಯಲ್ಲಿ ಶನಿವಾರ ತಡರಾತ್ರಿ ವಿದ್ಯಾರ್ಥಿಗಳ ಮಧ್ಯೆ ಕ್ಷುಲ್ಲಕ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಒಂಬತ್ತನೇ ತರಗತಿಯ ವಿದ್ಯಾರ್ಥಿಯೋರ್ವ ಕಬ್ಬಿಣದ ರಾಡ್‌ನಿಂದ ತನ್ನ ಸಹಪಾಠಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ದಾಳಿಯ ತೀವ್ರತೆಗೆ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಳಿದ ಏಳು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಲಾಟೆ ಬಿಡಿಸಲು ಬಂದ ಮಹಿಳಾ ವಾರ್ಡನ್ ಮೇಲೂ ಬಾಲಕ ದಾಳಿ ನಡೆಸಿದ್ದಾನೆ.
ಬಾಲಕನು ಹತಾಶೆಯಿಂದ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಹಾಸ್ಟೆಲ್‌ನಲ್ಲಿದ್ದುಕೊಂಡು ಓದಲು ತನಗೆ ಇಷ್ಟವಿರಲಿಲ್ಲ ಎಂದು ಬಾಲಕ ಪ್ರಾಥಮಿಕ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳ ಮೂಲಗಳು ಮಾಹಿತಿ ನೀಡಿವೆ. ಬಾಲಕನ ವಿಚಾರಣೆಯನ್ನು ಅತ್ಯಂತ ಎಚ್ಚರಿಕೆಯಿಂದ ಮಾಡುತ್ತಿದ್ದೇವೆ. ಇದಕ್ಕಾಗಿ ವೈದ್ಯಕೀಯ ತಜ್ಞರು, ಅಧಿಕಾರಿಗಳ ತಂಡ ರಚನೆ ಮಾಡಿಕೊಳ್ಳುತ್ತಿದ್ದೇವೆ. ಇದರಲ್ಲಿ ಪೊಲೀಸರು, ಮಾನಸಿಕ ತಜ್ಞರು, ವೈದ್ಯರು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಇರಲಿದ್ದಾರೆ. ಈ ಬಗ್ಗೆ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ವಿಮ್ಸ್) ಜತೆಗೆ ಮಾತನಾಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ ತಿಳಿಸಿದರು.
ಘಟನೆಗೆ ಕಾರಣವೇನು ಎಂಬುದರ ತನಿಖೆ ನಡೆಯುತ್ತಿದೆ. ಶಾಲೆಯವರು ಹಾಸ್ಟೆಲ್‌ಗೆ ಅನುಮತಿ ಪಡೆದಿದ್ದರೆ ಎಂಬುದರ ಬಗ್ಗೆ ಪರಿಶೀಲಿಸಲು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ಬರೆಯಲಾಗಿದೆ. ಶಾಲೆಯ ವೈಫಲ್ಯದ ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದು ಹೇಳಿದರು. ಘಟನೆ ಬಳಿಕ ಬಾಲಕ ಬಳ್ಳಾರಿ ನಗರದಲ್ಲೇ ಇದ್ದ. ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ಸೇವಿಸುತ್ತಾ ಎರಡು ದಿನ ಕಳೆದಿದ್ದ ಎನ್ನಲಾಗಿದೆ.
























