ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತಗೊಳಿಸಲಿರುವ ವೈದ್ಯರು
ಬೆಂಗಳೂರು : ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ ವೈದ್ಯರು ಮುಷ್ಕರ ಹೂಡಲು ಮುಂದಾಗಿರುವುದರಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮಾರ್ಚ್ 11ರಿಂದ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ.
ಇದರಿಂದಾಗಿ ರಾಜ್ಯದ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಜ್ವರ, ಕೆಮ್ಮು, ಚರ್ಮ ಸಂಬಂಧಿತ ಸಮಸ್ಯೆಗಳು, ಸ್ಕ್ಯಾನಿಂಗ್ ಅಥವಾ ರಕ್ತ ಪರೀಕ್ಷೆ ಸೇರಿದಂತೆ ಸಾಮಾನ್ಯ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿರುವ ರೋಗಿಗಳಿಗೆ ಇದು ದೊಡ್ಡ ತೊಂದರೆಯಾಗುವ ಆತಂಕ ವ್ಯಕ್ತವಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ.
ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲು ಈ ಮುಷ್ಕರಕ್ಕೆ ಕರೆ ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯದಿರುವ ವೃಂದ ಮತ್ತು ನೇಮಕಾತಿ ಪ್ರಕ್ರಿಯೆ, 13 ವರ್ಷಗಳಿಂದ ಪರಿಷ್ಕರಣೆಗೊಳ್ಳದ ವೈದ್ಯರ ಜ್ಯೇಷ್ಠತಾ ಪಟ್ಟಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಸೇರಿದಂತೆ ಒಟ್ಟು 15 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘ ಹೋರಾಟಕ್ಕೆ ಮುಂದಾಗಿದೆ.
ವೈದ್ಯರ ಬೇಡಿಕೆಗಳನ್ನು ಚರ್ಚಿಸಲು ಆರೋಗ್ಯ ಇಲಾಖೆ ಇದುವರೆಗೆ ಏಳು ಸಭೆಗಳನ್ನು ನಡೆಸಿದೆ. ಮಾರ್ಚ್ 2ರಂದು ಆರೋಗ್ಯ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯೂ ಫಲಪ್ರದವಾಗಲಿಲ್ಲ. ಸರ್ಕಾರದಿಂದ ಯಾವುದೇ ಲಿಖಿತ ಭರವಸೆ ಸಿಗದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಮುಂದಾಗಬೇಕಾಯಿತು ಎಂದು ಸಂಘದ ನಾಯಕರು ತಿಳಿಸಿದ್ದಾರೆ.
ಮಾರ್ಚ್ 11ರಿಂದ ವೈದ್ಯರು ಮತ್ತು ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಒಪಿಡಿ ಸೇವೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. ಮಾರ್ಚ್ 16ರಿಂದ ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರಾಗುವ ಎಚ್ಚರಿಕೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರವೀಂದ್ರನಾಥ್ ಮೇಟಿ ನೇತೃತ್ವದಲ್ಲಿ ವೈದ್ಯರು ಈಗಾಗಲೇ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮುಷ್ಕರದ ಹಿನ್ನೆಲೆ ಎಚ್ಚೆತ್ತ ಆರೋಗ್ಯ ಇಲಾಖೆ ಮುಷ್ಕರ ಕೈಬಿಟ್ಟು ಕಾನೂನ ಅಡಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಿದ್ದು, ಒಂದು ವೇಳೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತಂದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಹರ್ಷ ಗುಪ್ತಾ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಆರೋಗ್ಯ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರು ಹಾಗೂ ಇತರ ಸಿಬ್ಬಂದಿ ಸಾರ್ವಜನಿಕ ಆರೋಗ್ಯ ಸೇವೆಯ ನಿರಂತರತೆ ಹಾಗೂ ರೋಗಿಗಳ ಆರೋಗ್ಯ ಕಾಪಾಡುವ ಮಹತ್ವದ ವೃತ್ತಿಪರ ಮತ್ತು ನೈತಿಕ ಜವಾಬ್ದಾರಿಯನ್ನು ಹೊಂದಿದ್ದಾರೆ. ಸಾಮೂಹಿಕ ಮುಷ್ಕರದಂತಹ ಕ್ರಮಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದನ್ನು ಮನಗಂಡು ಕರ್ತವ್ಯಗಳನ್ನು ನಿರ್ವಹಿಸಿ ಬೇಡಿಕೆಗಳು ಮತ್ತು ಸಮಸ್ಯೆಗಳ ಕುರಿತು ಕಾನೂನಿನ ಅಡಿ ಲಭ್ಯವಿರುವ ಮಾರ್ಗಗಳನ್ನು ಬಳಸಿ ಬಗೆಹರಿಸುವುದು ಅಗತ್ಯವಾಗಿದ್ದು, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗದಂತೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
























