ಟೀಮ್‌ ಇಂಡಿಯಾ ಟಿ20 ಕ್ರಿಕೆಟ್‌ ಸಾರ್ವಭೌಮ

ಸತತ ಎರಡನೇ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಭಾರತ

96 ರನ್‌ಗಳ ಅಮೋಘ ಗೆಲುವಿನೊಂದಿಗೆ ಹಲವು ವಿಶ್ವ ದಾಖಲೆ ಬರೆದ ಸೂರ್ಯ ಪಡೆ

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೇಂಡ್‌ ವಿರುದ್ಧ ಅಮೋಘ 96 ರನ್‌ಗಳ ಗೆಲುವು ದಾಖಲಿಸುವ ಮೂಲಕ ಭಾರತ ಹಲವು ವಿಶ್ವದಾಖಲೆಗಳನ್ನು ಬರೆದಿದೆ. ಸೂರ್ಯಕುಮಾರ್‌ ಯಾದವ್‌ ನೇತೃತ್ವದ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ ಗೆದ್ದ ತಂಡ ಎಂಬ ಅಪೂರ್ವ ದಾಖಲೆ ಭಾರತದ ಪಾಲಾಗಿದೆ.





















































 
 

ಆರಂಭದಲ್ಲಿ ಬ್ಯಾಟರ್‌ಗಳ ವಿಸ್ಫೋಟಕ ಬ್ಯಾಟಿಂಗ್‌ ನಂತರ ಬೌಲರ್‌ಗಳ ಬೆಂಕಿ ಬೌಲಿಂಗ್‌ನಿಂದ ಫೈನಲ್‌ ಪಂದ್ಯದಲ್ಲಿ ಭಾರತ ಸತತ ಎರಡನೇ ಬಾರಿ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ನ್ಯೂಜಿಲೆಂಡ್‌ ವಿರುದ್ಧ 96 ರನ್‌ಗಳಿಂದ ಗೆದ್ದ ಭಾರತ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ 5 ವಿಕೆಟ್‌ ನಷ್ಟಕ್ಕೆ 255 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲು ಒಪ್ಪಿಕೊಂಡಿತು.

ಈ ಕೂಟದಲ್ಲಿ ಉಭಯ ತಂಡಗಳು ಅದ್ಭುತ ಪ್ರದರ್ಶನ ನೀಡಿ ಫೈನಲ್​ಗೇರಿದ್ದವು. ಹೀಗಾಗಿ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿತ್ತು. ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಟೀಂ ಇಂಡಿಯಾ, ಕಿವೀಸ್ ವಿರುದ್ಧ ಗೆದ್ದೇ ಇರಲಿಲ್ಲ. ಹೀಗಾಗಿ ಅದೊಂದು ಭಯದೊಂದಿಗೆ ಅಖಾಡಕ್ಕಿಳಿದಿದ್ದ ಟೀಂ ಇಂಡಿಯಾ ಪಂದ್ಯದ ಆರಂಭದಿಂದಲೇ ಕಿವೀಸ್ ಮೇಲೆ ಸವಾರಿ ಮಾಡಿತು. ಇದರ ಪರಿಣಾಮವಾಗಿ ಭಾರತದ ಮುಂದೆ ಮಂಡಿಯೂರಿದ ಕಿವೀಸ್, ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಮೊದಲ ಸೋಲು ಅನುಭವಿಸುವುದರ ಜೊತೆಗೆ ಚಾಂಪಿಯನ್ ಪಟ್ಟದಿಂದಲೂ ವಂಚಿತವಾಯಿತು.

ಈ ಪಂದ್ಯದಲ್ಲಿ ರನ್​ ಮಳೆಯೇ ಹರಿಯಿತು. ಕಿವೀಸ್ ಬೌಲರ್​ಗಳಿಗೆ ಮೊದಲ ಓವರ್​ನಿಂದಲೇ ಚಚ್ಚತೊಡಗಿದ ಟೀಂ ಇಂಡಿಯಾ ಬ್ಯಾಟರ್​ಗಳು ಆರಂಭದಲೇ ಕಿವೀಸ್ ಪಡೆಯನ್ನು ಪಂದ್ಯದಿಂದ ಹೊರಹಾಕಿದರು. ಉಳಿದ ಕೆಲಸವನ್ನು ತಂಡದ ಬೌಲರ್​ಗಳು ಮಾಡಿ ಮುಗಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ಇಡೀ ವಿಶ್ವಕಪ್‌ನಲ್ಲಿ ರನ್ ಬರ ಎದುರಿಸಿದ್ದ ಅಭಿಷೇಕ್ ಶರ್ಮಾ ಕೊನೆಗೂ ಲಯ ಕಂಡುಕೊಳ್ಳುವುದರೊಂದಿಗೆ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಸಂಜು ಹ್ಯಾಟ್ರಿಕ್ ಅರ್ಧಶತಕ

ಅಮೋಘ ಫಾರ್ಮ್ ಮುಂದುವರಿಸಿದ ಸಂಜು ಸ್ಯಾಮ್ಸನ್ ಸತತ ಮೂರನೇ ಪಂದ್ಯದಲ್ಲಿ ಅರ್ಧ ಶತಕ ಪೂರೈಸುವುದರ ಮೂಲಕ ಹ್ಯಾಟ್ರಿಕ್ ಅರ್ಧ ಶತಕ ದಾಖಲಿಸಿದರು. ಈ ಜೋಡಿಯ ಅಬ್ಬರದಿಂದಾಗಿ ಟೀಂ ಇಂಡಿಯಾ ಮೊದಲ ವಿಕೆಟ್​ಗೆ 98 ರನ್ ಕಲೆಹಾಕಿತು. ಇದಕ್ಕೆ ತೆಗೆದುಕೊಂಡಿದ್ದು ಕೇವಲ 43 ಎಸೆತಗಳು ಮಾತ್ರ. 52 ರನ್ ಬಾರಿಸಿದ ಅಭಿಷೇಕ್ ಶರ್ಮಾ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆನಂತರ ಬಂದ ಇಶಾನ್ ಕಿಶನ್, ಸಂಜು ಸ್ಯಾಮ್ಸನ್‌ ಜೊತೆಗೂಡಿ ರನ್ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಇವರಿಬ್ಬರು ಶತಕದ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ತಂಡವನ್ನು 200 ರನ್​ಗಳ ಗಡಿ ದಾಟಿಸಿದರು.

ಕೇವಲ 15.1 ಓವರ್​ಗಳಲ್ಲಿ ತಂಡವನ್ನು 200 ರನ್​ಗಳ ಗಡಿ ದಾಟಿಸಿದ ಈ ಜೋಡಿ ಸ್ಯಾಮ್ಸನ್‌ ವಿಕೆಟ್ ಪತನದೊಂದಿಗೆ ಬೇರ್ಪಟ್ಟಿತು. ಸತತ ಮೂರನೇ ಪಂದ್ಯದಲ್ಲೂ ಶತಕ ವಂಚಿತರಾದ ಸಂಜು ಸ್ಯಾಮ್ಸನ್ 89 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಸಂಜು ಬೆನ್ನಲ್ಲೇ ಇಶಾನ್ ಕಿಶನ್ ಕೂಡ 54 ರನ್​​ಗಳಿಗೆ ಪೆವಿಲಿಯನ್‌ ಸೇರಿಕೊಂಡರು. ನಾಯಕ ಸೂರ್ಯಕುಮಾರ್ ಯಾದವ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಜಿಮ್ಮಿ ನಿಶಮ್ ಎಸೆದ ಈ ಓವರ್​ನಲ್ಲಿ ಭಾರತ ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡಿತು. ಆದ್ದರಿಂದ ತಂಡದ ರನ್ ವೇಗಕ್ಕೆ ಬ್ರೇಕ್ ಬಿದ್ದಿತು. ಕೊನೆಯ ಓವರ್​ನಲ್ಲಿ ಶಿವಂ ದುಬೆ (26 ರನ್) ಅಬ್ಬರಿಸುವ ಮೂಲಕ ತಂಡವನ್ನು 255 ರನ್​ಗಳಿಗೆ ಕೊಂಡೊಯ್ದರು.

4 ವಿಶ್ವದಾಖಲೆ

ಇಲ್ಲಿಯವರೆಗೆ ಸತತ ಎರಡು ಟಿ20 ಫೈನಲ್‌ ಪಂದ್ಯವನ್ನು ಯಾವುದೇ ತಂಡ ಜಯಗಳಿಸಿಲ್ಲ. ಆದರೆ ಭಾರತ 2024 ಮತ್ತು 2026ರಲ್ಲಿ ಜಯಗಳಿಸುವ ಮೂಲಕ ಸತತ ಎರಡನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಟಿ20 ವಿಶ್ವಕಪ್‌ ಆತಿಥ್ಯ ವಹಿಸಿದ ತಂಡ ಇಲ್ಲಿಯವರೆಗೆ ಚಾಂಪಿಯನ್‌ ಪಟ್ಟ ಅಲಂಕರಿಸಿರಲಿಲ್ಲ. ಈ ಬಾರಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಟೂರ್ನಿಯನ್ನು ಆಯೋಜಿಸಿತ್ತು. ಇಲ್ಲಿಯವರೆಗೆ ಯಾವುದೇ ತಂಡ 3 ಟಿ20 ವಿಶ್ವಕಪ್‌ ಪಂದ್ಯ ಗೆದ್ದಿರಲಿಲ್ಲ. ಆದರೆ 2008, 2024 ಮತ್ತು 2026ರಲ್ಲಿ ಜಯಿಸುವ ಮೂಲಕ ಭಾರತ ವಿಶ್ವದಾಖಲೆ ಬರೆದಿದೆ. ಇಂಗ್ಲೆಂಡ್‌ 2010, 2022ರಲ್ಲಿ ಟ್ರೋಫಿ ಗೆದ್ದರೆ ವೆಸ್ಟ್‌ ಇಂಡೀಸ್‌ 2012 ಮತ್ತು 2016ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಭಾರತ ಈ ಪಂದ್ಯದಲ್ಲಿ 5 ವಿಕೆಟ್‌ ನಷ್ಟಕ್ಕೆ 255 ರನ್‌ ಹೊಡೆಯಿತು. ಇದು ಟಿ20 ಟೂರ್ನಿಯ ಫೈನಲ್‌ನಲ್ಲಿ ತಂಡವೊಂದು ಬಾರಿಸಿದ ಅತ್ಯಧಿಕ ಮೊತ್ತ.

ಭಾರತದ ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ ಆರಂಭಿಕ ಆಟಗಾರ ಟಿಮ್ ಸೀಫರ್ಟ್ ಹಾರ್ದಿಕ್‌ ಪಾಂಡ್ಯ ಎಸೆದ ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ 21 ರನ್‌ ಚಚ್ಚಿದರು. ಆದರೆ ಅಕ್ಷರ್‌ ಪಟೇಲ್‌ ಎಸೆದ 3ನೇ ಓವರ್‌ನ ನಾಲ್ಕನೇ ಎಸೆತದಲ್ಲಿ 9 ರನ್‌ ಗಳಿಸಿದ್ದ ಫಿನ್‌ ಅಲೆನ್‌ ಸಿಕ್ಸ್‌ ಸಿಡಿಸುವ ಪ್ರಯತ್ನದಲ್ಲಿ ಬೌಂಡರಿ ಗೆರೆಯ ಬಳಿ ತಿಲಕ್‌ ವರ್ಮಾ ಅವರಿಗೆ ಕ್ಯಾಚ್‌ ನೀಡಿ ಔಟಾದರು.

ನ್ಯೂಜಿಲೆಂಡಿಗೆ ಎರಡನೇ ಆಘಾತ ನೀಡಿದ್ದ ಬುಮ್ರಾ. ತಮ್ಮ ಮೊದಲ ಎಸೆತದಲ್ಲೇ 1 ರನ್‌ ಗಳಿಸಿದ್ದ ರಚಿನ್‌ ರವೀಂದ್ರ ಅವರನ್ನು ಔಟಾದರು. ಇಶನ್‌ ಕಿಶನ್‌ ಉತ್ತಮ ಕ್ಯಾಚ್‌ ಹಿಡಿದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಬಂದ ಗ್ಲೇನ್‌ ಫಿಲಿಪ್ಸ್‌ 5 ರನ್‌ ಗಳಿಸಿದ್ದಾಗ ಅಕ್ಷರ್‌ ಪಟೇಲ್‌ ಬೌಲ್ಡ್‌ ಮಾಡಿದರು. ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 31 ರನ್‌ ಗಳಿಸಿದ್ದ ನ್ಯೂಜಿಲೆಂಡ್‌ 47 ರನ್‌ ಗಳಿಸುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತ್ತು.

ಸಂಕಷ್ಟದ ಸಮಯದಲ್ಲಿ ಮಾರ್ಕ್‌ ಚಾಪ್‌ಮನ್‌ ಮತ್ತು ಟಿಮ್ ಸೀಫರ್ಟ್ ಅವರು ನಾಲ್ಕನೇ ವಿಕೆಟಿಗೆ 23 ರನ್‌ ಜೊತೆಯಾಟವಾಡಿದರು. ಆದರೆ ಹಾರ್ದಿಕ್‌ ಎಸೆದ ಓವರ್‌ನಲ್ಲಿ ಬಲವಾಗಿ ಹೊಡೆಯಲು ಹೋಗಿ ಚಾಪಮನ್‌ ಬ್ಯಾಟಿಗೆ ತಗುಲಿ ವಿಕೆಟಿಗೆ ಬಡಿಯಿತು. ಚಾಪಮನ್‌ ಔಟಾದ ಬೆನ್ನಲ್ಲೇ ಒಂದು ಸಿಕ್ಸ್‌ ಸಿಡಿಸಲು ಹೋಗಿ 52 ರನ್‌ (26 ಎಸೆತ,2 ಬೌಂಡರಿ, 5 ಸಿಕ್ಸ್‌) ಹೊಡೆದಿದ್ದ ಟಿಮ್ ಸೀಫರ್ಟ್ ಇಶನ್‌ ಕಿಶನ್‌ ಬೌಂಡರಿ ಬಳಿ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು.

ಡ್ಯಾರಿಲ್ ಮಿಚೆಲ್ 37 ರನ್‌ ಹೊಡೆದು ಔಟಾದರು. 16ನೇ ಓವರ್‌ ಎಸೆದ ಬುಮ್ರಾ ಜೇಮ್ಸ್‌ ನಿಶಮ್‌ ಮತ್ತು ಮ್ಯಾಟ್‌ ಹೆನ್ರಿ ಅವರನ್ನು ಬೌಲ್ಡ್‌ ಮಾಡಿದರು. ಸ್ವಲ್ಪ ಪ್ರತಿರೋಧ ತೋರಿದ ಮಿಚೆಲ್ ಸ್ಯಾಂಟ್ನರ್ 43 ರನ್‌(35 ಎಸೆತ, 3 ಬೌಂಡರಿ, 2 ಸಿಕ್ಸ್‌) ಹೊಡೆದು ಬುಮ್ರಾಗೆ ವಿಕೆಟ್‌ ಒಪ್ಪಿಸಿದರು.

error: Content is protected !!
Scroll to Top