ಕಾಸರಗೋಡು: ಮೊಬೈಲ್ ಡಿಸ್ಪ್ಲೇ ರಿಪೇರಿ ಮಾಡಿಸಿಕೊಟ್ಟಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕಳತ್ತೂರಿನ ಕಿದೂರು ಎಂಬಲ್ಲಿ ನಡೆದಿದೆ.
ಮೃತಳನ್ನು ಎಂ.ಡಿ. ಪೂಜಾ(17) ಎಂದು ಗುರುತಿಸಲಾಗಿದೆ.
ಪೂಜಾ ಮಂಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದಳು. ಅನಾರೋಗ್ಯದ ಕಾರಣಕ್ಕೆ ಆಕೆಯ ಶಿಕ್ಷಣ ಅರ್ಧಕ್ಕೆ ನಿಂತಿತ್ತು. ಅದನ್ನು ಮುಂದಿನ ವರ್ಷದಿಂದ ಮತ್ತೆ ಮುಂದುವರೆಸುವ ಸಿದ್ಧತೆಯಲ್ಲಿದ್ದಳು. ಕೆಲ ದಿನಗಳ ಹಿಂದೆ ಪೂಜಾಳ ಫೋನ್ ಡಿಸ್ಪ್ಲೇ ಹಾಳಾಗಿದ್ದು, ಅದನ್ನು ರಿಪೇರಿ ಮಾಡಿಸಿ ಕೊಡುವಂತೆ ಮನೆಯವರಲ್ಲಿ ಹೇಳುತ್ತಿದ್ದಳು. ಇಲ್ಲವಾದಲ್ಲಿ ಆತ್ಮಹತ್ಯೆಯ ಬೆದರಿಕೆಯನ್ನೂ ಹಾಕುತ್ತಿದ್ದಳು.
ಆದರೆ ಮನೆಯವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಫೋನ್ ಸರಿ ಮಾಡಿಸಿ ಕೊಡಲು ಸಾಧ್ಯವಾಗಿಲ್ಲ. ಫೋನ್ ಸರಿ ಮಾಡಿಸಿ ಕೊಡಬೇಕು ಇಲ್ಲದಿದ್ದಲ್ಲಿ ತಾನು ಇಲಿ ಪಾಷಾಣ ಸೇವಿಸುವುದಾಗಿ ಗುರುವಾರ ಸಂಜೆಯೂ ಸಹ ಆಕೆ ಮನೆಯವರಿಗೆ ಬೆದರಿಕೆ ಹಾಕಿ ಜಗಳವಾಡಿದ್ದಳು.
ಆದರೆ ಆಕೆ ಈ ಹಿಂದೆಯೂ ಇದೇ ರೀತಿ ಬೆದರಿಕೆಗಳನ್ನು ಹಾಕುತ್ತಿದ್ದ ಕಾರಣ ಮನೆಯವರು ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಆದರೆ ಆ ದಿನ ಪೂಜಾ ನಿಜಕ್ಕೂ ವಿಷ ಸೇವನೆ ಮಾಡಿದ್ದಾಳೆ. ಆಕೆಯ ಪರಿಸ್ಥಿತಿ ಗಂಭೀರವಾದಾಗ ಮನೆಯವರು ಆಕೆಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
























