ಬಾಗಲಕೋಟೆ: ತನ್ನ ಮಗನ ಕೈಯಿಂದ ಮುಸ್ಲಿಂ ತಂದೆಯೊಬ್ಬ ಸೆಕ್ಟರ್ 44 ಮಸೀದಿಯ ಗೋಡೆಯ ಮೇಲೆಯೇ ‘ಜೈ ಶ್ರೀರಾಮ್’ ಎಂದು ಬರೆಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ಇದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಶಿವಾಜಿ ಮೆರವಣಿಗೆಯ ಸಮಯದಲ್ಲಿ ನಡೆದ ಕಲ್ಲು ತೂರಾಟ ಘಟನೆಯ ಕಾವು ಕಡಿಮೆಯಾಗುವ ಮೊದಲೇ ಮತ್ತೊಂದು ವಿವಾದಾತ್ಮಕ ಘಟನೆ ನಡೆದಿದ್ದು, ನಗರ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನುವುದು ಸತ್ಯ.
ಮಗನ ಕೈಯಿಂದ ಗೋಡೆ ಮೇಲೆ ಬರೆಯಿಸಿ ಬಳಿಕ ಅಲ್ಲಿಂದ ಆಟೋ ಹತ್ತಿ ತೆರಳಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಈ ಘಟನೆಗೆ ಕಾರಣಕರ್ತರಾದ ತಂದೆ ಮತ್ತು ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಗೋಡೆ ಬರಹವನ್ನು ಪೊಲೀಸರು ನೀರು ಹಾಕಿ ಉಜ್ಜಿ ಅಳಿಸಿದ್ದಾರೆ.
ಆದರೆ ಯಾತಕ್ಕಾಗಿ ಹನ್ನೆರಡು ವರ್ಷದ ಬಾಲಕನ ಕೈಯಿಂದ ಇಂತಹ ಕೆಲಸ ಮಾಡಿಸಲಾಗಿದೆ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























