ನಾಳೆ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್‌ ಮಂಡನೆ

ಅನುದಾನ, ಅಭಿವೃದ್ಧಿಗಾಗಿ ಕಾದು ಕುಳಿತಿದ್ದಾರೆ ಕರುನಾಡ ಜನ

ಬೆಂಗಳೂರು : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಗ್ಯಾರಂಟಿಯಿಂದ ಸದುರಾಗಿರುವ ಆರ್ಥಿಕ ಸವಾಲುಗಳ ನಡುವೆ ತನ್ನ ದಾಖಲೆಯ 17ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ. ಈಗಾಗಲೇ ಅನೇಕ ವಸ್ತು ಮತ್ತು ಸೇವೆಗಳ ಬೆಲೆ ಏರಿಕೆ ಮಾಡಿ ಭಾರಿ ಟೀಕೆಗೆ ಗುರಿಯಾಗಿರುವ ಸಿದ್ದರಾಮಯ್ಯನವರು ದಾಖಲೆಯ 17ನೇ ಬಜೆಟ್‌ನಲ್ಲಿ ಯಾವ ಕರಾಮತ್ತು ತೋರಿಸಲಿದ್ದಾರೆ ಎಂಬ ನಿರೀಕ್ಷೆ ಬಹಳ ಇದೆ.

ಒಂದೆಡೆ ಗ್ಯಾರಂಟಿಯಿಂದಾಗಿ ಬೊಕ್ಕಸ ಬರಿದಾಗಿದೆ ಎಂಬ ಟೀಕೆ, ಇನ್ನೊಂದೆಡೆ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸಿಗುತ್ತಿಲ್ಲ ಎಂಬ ಆರೋಪ ಸತತವಾಗಿ ಸರ್ಕಾರ ಮೇಲೆ ಕೇಳುತ್ತಾ ಬಂದಿದೆ. ಹೀಗಾಗಿ ಈ ಸಲವಾದರೂ ಸಾಕಷ್ಟು ಯೋಜನೆಗಳು ಘೋಷಣೆಯಾಗುತ್ತವೆಯೇ ಹಾಗೂ ಈಗಾಗಲೇ ಘೋಷಣೆಯಾಗಿರುವ ಯೋಜನೆಗಳಿಗೆ ಹಣ ಎತ್ತಿಡುತ್ತಾರೆಯೇ ಎಂಬ ಕುತೂಹಲವೂ ಇದೆ.





















































 
 

ರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಸಿದ್ದರಾಮಯ್ಯ ಈ ಸಲ ನಿರ್ಮಿಸಲಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಅತಿಹೆಚ್ಚು ಕಾಲ ಮುಖ್ಯಮಂತ್ರಿಯಾದ ದಾಖಲೆಗೆ ಜನವರಿಯಲ್ಲಿ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. 7 ವರ್ಷ 239 ದಿನಗಳ ಕಾಲ ಸಿಎಂ ಆಗಿದ್ದ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಹಿಂದಿಕ್ಕಿದ್ದಾರೆ. ಇದೀಗ ಬಜೆಟ್ ಮಂಡನೆಯಲ್ಲಿಯೂ ದಾಖಲೆ ನಿರ್ಮಿಸಲಿದ್ದಾರೆ.

ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿ ಆಯವ್ಯಯದ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ರಾಜ್ಯದ ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವು ಯೋಜನೆಗಳಲ್ಲಿ ಬದಲಾವಣೆಗಳು ಆಗಬಹುದೇ ಎಂಬ ಕುತೂಹಲವೂ ಮೂಡಿದೆ.

ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ರಾಜ್ಯದ ಜನತೆ ಮತ್ತು ವಿವಿಧ ವಲಯಗಳು ಈ ಬಜೆಟ್‌ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿವೆ.

ಕರ್ನಾಟಕ ಬಜೆಟ್ ಅಧಿವೇಶನವು ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ನಡೆಯಲಿದ್ದು, ಒಟ್ಟು 14 ದಿನಗಳ ಕಾಲ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಚರ್ಚೆಗಳು ನಡೆಯಲಿವೆ. ಬಜೆಟ್‌ ಮಂಡನೆಯ ಬಳಿಕ ವಿವಿಧ ಇಲಾಖೆಗಳ ಅನುದಾನಗಳ ಕುರಿತು ಚರ್ಚೆ ನಡೆಯಲಿದೆ.

error: Content is protected !!
Scroll to Top