ಪುತ್ತೂರು: LIVE ALL SERVE ALL – HELP EVERY BIT NEVER ಎಂಬ ಧ್ಯೇಯದೊಂದಿಗೆ ಭಕ್ತಿಯ ಸಿಂಚನದ ಮೂಲಕ ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡು ಬರುತ್ತಿರುವ ಶ್ರೀ ಸಾಯಿ ಸೇವಾ ಬಳಗದ ವತಿಯಿಂದ ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರ ಜನ್ಮಶತಮಾನೋತ್ಸವದ ಆಚರಣೆಯ ಅಂಗವಾಗಿ ಶ್ರೀ ಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥ ಪುತ್ತೂರಿಗೆ ಆಗಮಿಸಲಿದೆ.
ಪುತ್ತೂರಿನ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ನೇತೃತ್ವದಲ್ಲಿ ಮಾರ್ಚ್ 8ರಂದು ಅಪರಾಹ್ನ 2.30ಕ್ಕೆ ಕೌಡಿಚ್ಚಾರಿನ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಪುತ್ತೂರು ತಾಲೂಕಿಗೆ ಸ್ವಾಗತಿಸಿದ ಬಳಿಕ ವಾಹನ ಜಾತಾವು ದರ್ಬೆಗೆ ತಲುಪಲಿದೆ. ಅಲ್ಲಿಂದ ರಥ ಸಹಿತ ಕಾಲ್ನಡಿಗೆ ಜಾಥಾವು ಕೋರ್ಟ್ ರಸ್ತೆಯಲ್ಲಿರುವ ಶ್ರೀ ಸತ್ಯ ಸಾಯಿ ಮಂದಿರಕ್ಕೆ ಆಗಮಿಸಲಿದೆ. ಬಳಿಕ ಮೆರವಣಿಗೆಯು ಶ್ರೀ ಮಹಾಮಾಯಾ ದೇವಳಕ್ಕೆ ಸಾಗಿ ಅಲ್ಲಿ ಪುತ್ತೂರು ಸಮಿತಿಯ ಯುವ ಕಲಾವಿದರಿಂದ ‘ಶ್ರೀ ಸತ್ಯ ಸಾಯಿ ನೃತ್ಯ ವಂದನಂ’ ಎಂಬ ಭರತನಾಟ್ಯ ಮತ್ತು ಸಭಾ ಕಾರ್ಯಕ್ರಮಗಳು ಜರುಗಲಿವೆ.

ಸಭಾ ಕಾರ್ಯಕ್ರಮ
ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ (ಉತ್ತರ) ಇದರ ರಾಜ್ಯಾಧ್ಯಕ್ಷ ಯಂ. ಪದ್ಮನಾಭ ಪೈಯವರ ಅಧ್ಯಕ್ಷತೆಯಲ್ಲಿ ಮೂಡಿಬರಲಿರುವ ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಎಜುಕೆರ್’ನ ರಾಜ್ಯ ಸಂಯೋಜಕ ಜಗನ್ನಾಥ ನಾಡಿಗೇರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸವಣೂರಿನ ಶಿಲ್ಪಿ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರಿ ರತ್ನ ಸವಣೂರು ಸೀತಾರಾಮ ರೈ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ (ಉತ್ತರ) ಇದರ ಮಹಿಳಾ ಸೇವಾ ಸಂಯೋಜಕಿ ಪ್ರಿಯಾ ಪಿ. ಪೈ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರಸನ್ನ ಯನ್. ಭಟ್ ಗೌರವ ಉಪಸ್ಥಿತರಾಗಿರುತ್ತಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಸಾಯಿ ಕೇಂದ್ರಿತ ನೃತ್ಯ-ಸಂಗೀತಗಳು ನಡೆಯಲಿದ್ದು ಮಂಗಳಾರತಿ ಮತ್ತು ಉಪಾಹಾರ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾಪನ ಕಾಣಲಿದೆ.
ದಿನಾಂಕ ಮಾರ್ಚ್ 9ರಂದು ಮುಂಜಾನೆ 5.30ರಿಂದ ಓಂಕಾರ ಸುಪ್ರಭಾತ, ಭಜನೆ, ಮಂಗಳಾರತಿ ಸೇವೆ ಪಡೆಯುವ ರಥ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ತೆರಳಿ 6.45ಕ್ಕೆ ಮಂಗಳಾರತಿ ಸ್ವೀಕರಿಸಿ ಉಪ್ಪಿನಂಗಡಿಗೆ ಪ್ರಯಾಣಿಸಲಿದೆ.
ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ಸಂಚಾಲಕ ದಯಾನಂದ ಕೆ. ಯಸ್., ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್’ನ ಅಧ್ಯಕ್ಷ ಡಾ. ಸತ್ಯಸುಂದರ ರಾವ್ ಮತ್ತು ಪುತ್ತೂರಿನ ಶ್ರೀ ಸತ್ಯ ಸಾಯಿ ಜನ್ಮ ಶತಾಬ್ಧಿ ಆಚರಣಾ ಸಮಿತಿ ಅಧ್ಯಕ್ಷ ರಘುನಾಥ ರೈ ಅವರು ಸಮಿತಿಗಳ ಪರವಾಗಿ ಎಲ್ಲರನ್ನೂ ಸ್ವಾಗತಿಸಿದ್ದಾರೆ ಎಂದು ಮಂಗಳೂರಿನ ಎಸ್. ಡಿ. ಎಂ. ಕಾನೂನು ಪದವಿ ಕಾಲೇಜಿನ ಪ್ರೊಫೆಸರ್ ಡಾ. ಸಂತೋಷ್ ಪ್ರಭು ಅಜೇರು ತಿಳಿಸಿದ್ದಾರೆ.
























