ಖಮೇನಿ ಅಧಿಕೃತ ನಿವಾಸವನ್ನು ಗುರಿ ಮಾಡಿಕೊಂಡ ನಡೆದ ಕ್ಷಿಪಣಿ ದಾಳಿ
ಟೆಹ್ರಾನ್ : ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದ ದೃಢಪಟ್ಟ ಬೆನ್ನಿಗೆ ವೈಮಾನಿಕ ದಾಳಿಯಲ್ಲಿ ಖಮೇನಿ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗಳೂ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಕ್ಷಿಪಣಿ ದಾಳಿಗೆ ಬಲಿಯಾದ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಅವರ ಮೃತದೇಹ ಪತ್ತೆಯಾಗಿದೆ ಎಂದೂ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆ ಬಹುತೇಕ ದೃಢಪಟ್ಟಿದೆ. ಖಮೇನಿ ಹತ್ಯೆ ದೃಢಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಈ ಮಧ್ಯೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗಳು ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮ ವರದಿ ಪ್ರಕಟಿಸಿದೆ. “ಕ್ಷಿಪಣಿ ದಾಳಿ ನಡೆದ ಸಮಯದಲ್ಲಿ ಮನೆಯ ಆವರಣದಲ್ಲಿ ಖಮೇನಿ ಮಗಳು, ಅಳಿಯ ಮತ್ತು ಮೊಮ್ಮಗಳು ಇದ್ದರು ಎಂಬುದು ದೃಢಪಟ್ಟಿದೆ” ಎಂದು ಫಾರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.
ಅಮೆರಿಕ-ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯಲ್ಲಿ ನಮ್ಮ ಕ್ರಾಂತಿಕಾರಿ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರಿ, ಅವರ ಪತಿ ಮತ್ತು ಖಮೇನಿ ಮೊಮ್ಮಗಳು ಹುತಾತ್ಮರಾಗಿದ್ದಾರೆ. ಇರಾನ್‌ಗಾಗಿ ಇವರು ತಮ್ಮ ಜೀವ ತೆತ್ತಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಬಿತ್ತರಿಸಿವೆ.
ಇಸ್ರೇಲ್ ಮಾಧ್ಯಮಗಳು ದಾಳಿಯಲ್ಲಿ ಹತರಾದ ಇಸ್ರೇಲ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಅವರ ಮೃತದೇಹ ಪತ್ತೆಯಾಗಿದೆ ಎಂದು ಪ್ರತಿಪಾದಿಸಿವೆ. ಇರಾನ್ ರಕ್ಷಣಾ ಸಚಿವ ಮತ್ತು ಐಆರ್‌ಜಿಸಿ ಕಮಾಂಡರ್ ಹತ್ಯೆ ಮಾಹಿತಿ ನಿಜ ಎಂದು ನಿನ್ನೆ (ಫೆ.28-ಶನಿವಾರ)ಯಿಂದಲೇ ಇಸ್ರೇಲ್ ಮಾಧ್ಯಮಗಳು ವರದಿ ಮಾಡುತ್ತಿವೆ.
ಆದರೆ ಖಮೇನಿ ಸಾವಿನ ಸುದ್ದಿ ಸುಳ್ಳು ಎಂದು ಹೇಳಿರುವ ಇರಾನ್ ಮಾಧ್ಯಮಗಳು, ಖಮೇನಿ ಅವರ ಕಟುಂಬದ ಸದಸ್ಯರು ಹತರಾಗಿರುವುದು ನಿಜ ಎಂದು ಪ್ರತಿಪಾದಿಸಿವೆ. ಈ ಕುರಿತು ನಿರಂತರವಾಗಿ ವರದಿ ಮಾಡಿರುವ ಇರಾನ್‌ನ ತಸ್ನಿಮ್ ಮತ್ತು ಮೆಹರ್ ಸುದ್ದಿವಾಹಿನಿಗಳು, 1989ರಿಂದ ಇರಾನ್ ಮುನ್ನಡೆಸುತ್ತಿರುವ ಆಯತೊಲ್ಲಾ ಅಲಿ ಖಮೇನಿ ಈಗಲೂ ದೇಶ ರಕ್ಷಣೆಯಲ್ಲಿ ದೃಢವಾಗಿ ನಿಂತಿದ್ದಾರೆ ಎಂದು ಹೇಳಿದೆ.
ಈಗಲೂ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸಿವೆ. ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ನೆಲೆಸಲು ಇರಾನ್ ಮೇಲಿನ ದಾಳಿಯನ್ನು ಮುಂದುವರಿಸುವುದಾಗಿ ಉಭಯ ರಾಷ್ಟ್ರಗಳು ಸ್ಪಷ್ಟಪಡಿಸಿವೆ.
ಇರಾನ್ ನಿರಾಕರಣೆ ಹೊರತಾಗಿಯೂ ಇಸ್ರೇಲ್ ಮಾಧ್ಯಮಗಳು ಖಮೇನಿ ಹತ್ಯೆಯ ಬಗ್ಗೆ ವರದಿ ಪ್ರಕಟಿಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಖಮೇನಿ ಮೃತದೇಹದ ಫೋಟೋ ತೋರಿಸಲಾಗಿದೆ ಎಂದು ಇಸ್ರೇಲ್ ಮಾಧ್ಯಮಗಳು ಪ್ರತಿಪಾದಿಸಿವೆ.
























