ಗಲ್ಫ್‌ನಲ್ಲಿರುವ ಕನ್ನಡಿಗರ ರಕ್ಷಣೆಗೆ ಸಕಲ ಕ್ರಮ: ಸಿದ್ದರಾಮಯ್ಯ ಭರವಸೆ

ಯುದ್ಧದಿಂದಾಗಿ ವಿಮಾನಗಳು ರದ್ದಾಗಿ ಆತಂಕದ ಸ್ಥಿತಿ

ಬೆಂಗಳೂರು: ಯುದ್ಧದಿಂದಾಗಿ ವಿಮಾನ ಸಂಚಾರ ರದ್ದಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕನ್ನಡಿಗರ ಸುರಕ್ಷತೆಗೆ ಎಲ್ಲ ರೀತಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಎಕ್ಸ್ ಸಂದೇಶದ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ದೆಹಲಿಯ ನಿವಾಸಿ ಆಯುಕ್ತರ ಜೊತೆ ಸಮಾಲೋಚನೆ ನಡೆಸಿರುವುದಾಗಿಯೂ ತಿಳಿಸಿದ್ದಾರೆ.

ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಇಸ್ರೇಲ್, ಯುಎಇ, ಇರಾನ್, ಖತಾರ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ದೆಹಲಿಯ ನಿವಾಸಿ ಆಯುಕ್ತರ ಜೊತೆ ಸಮಾಲೋಚನೆ ನಡೆಸಿ, ಅವರ ಸುರಕ್ಷತೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಮಧ್ಯಪ್ರಾಚ್ಯ ದೇಶಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿರುವ ಕಾರಣ ನಾಡಿಗೆ ಮರಳಲು ಸಾಧ್ಯವಾಗದೆ ಯುದ್ಧಪೀಡಿತ ರಾಷ್ಟ್ರಗಳಲ್ಲಿ ಸಿಲುಕಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.





















































 
 

ಸಹಾಯವಾಣಿಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯುದ್ಧಪೀಡಿತ ದೇಶಗಳಲ್ಲಿ ನೆಲೆಸಿರುವ ಕುಟುಂಬ ಸದಸ್ಯರು ಸಂಪರ್ಕಕ್ಕೆ ಸಿಗದೆ ಇದ್ದಲ್ಲಿ ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ. ಪ್ರತಿಯೊಬ್ಬ ಕನ್ನಡಿಗನ ಸುರಕ್ಷತೆ ನಮ್ಮ‌ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಅವರು ಉಲ್ಲೇಖಿಸಿದ್ದಾರೆ.

ಬಳ್ಳಾರಿ ಮೂಲದ 32 ಮಂದಿ ದುಬೈನಲ್ಲಿ ಸಿಲುಕಿರುವ ಬಗ್ಗೆ ಮಾಜಿ ಸಚಿವರಾದ ನಾಗೇಂದ್ರ ಅವರು ನನಗೆ ಮಾಹಿತಿ ನೀಡಿದ್ದು, ಅವರ ಸುರಕ್ಷತೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

ವಿಮಾನ ಸಂಚಾರ ರದ್ದಾದ ಕಾರಣ ದುಬೈನಲ್ಲಿ ಐವತ್ತಕ್ಕೂ ಹೆಚ್ಚು ಕನ್ನಡಿಗರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಇದರಲ್ಲಿ ಬಳ್ಳಾರಿ ಮತ್ತು ದಾವಣಗೆರೆಯ ಪ್ರವಾಸಿಗರು ಇದ್ದಾರೆ. ತಮ್ಮನ್ನು ಹೇಗಾದರೂ ಮಾಡಿ ಸಂದೇಶಕ್ಕೆ ಕರೆಸಿಕೊಳ್ಳುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆ ಇರಾನ್ ವಾಯುಪ್ರದೇಶ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಮಂಗಳೂರು ಹಾಗೂ ಗಲ್ಫ್ ರಾಷ್ಟ್ರಗಳ ನಡುವೆ ಸಂಚರಿಸುವ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ವಿಮಾನಗಳು ರದ್ದಾಗಿದ್ದರೆ, ಕೆಲವು ಟೇಕಾಫ್ ಬಳಿಕ ವಾಪಸ್ ಮಂಗಳೂರಿಗೆ ಮರಳಿದವು, ಕೆಲವು ವಿಮಾನಗಳನ್ನು ಬೇರೆ ಕಡೆಗಳಿಗೆ ಡೈವರ್ಟ್ ಮಾಡಲಾಗಿದೆ. ಇಂದು ಕೂಡ ಅನೇಕ ವಿಮಾನಗಳು ರದ್ದಾಗಲಿವೆ.

ವಿಮಾನ ಸಂಚಾರ ಸ್ಥಗಿತಗೊಂಡ ಪರಿಣಾಮವಾಗಿ, ಗಲ್ಫ್ ದೇಶಗಳಿಂದ ಮಂಗಳೂರಿಗೆ ಆಗಮಿಸಬೇಕಿದ್ದ ಹಲವು ವಿಮಾನಗಳು ರದ್ದಾಗಿವೆ. ಮಧ್ಯಪ್ರಾಚ್ಯಕ್ಕೆ ನೇರ ಮಾರ್ಗ ಲಭ್ಯವಿಲ್ಲದ ಕಾರಣ ವಿಮಾನಯಾನ ಸಂಸ್ಥೆಗಳು ತಾತ್ಕಾಲಿಕವಾಗಿ ಈ ಕ್ರಮ ಕೈಗೊಂಡಿವೆ. ವಿದೇಶಾಂಗ ಸಚಿವಾಲಯ ಹಾಗೂ ರಾಜ್ಯ ಸರ್ಕಾರ ತುರ್ತು ನೆರವು ನೀಡಬೇಕು, ಶೀಘ್ರವೇ ಸ್ವದೇಶಕ್ಕೆ ಮರಳುವ ವ್ಯವಸ್ಥೆ ಮಾಡಬೇಕು ಎಂದು ಪ್ರವಾಸಿಗರು ಮನವಿ ಮಾಡಿದ್ದಾರೆ.

error: Content is protected !!
Scroll to Top