ಚಿಕ್ಕಬಳ್ಳಾಪುರ: ವಿವಾಹಿತ ಪ್ರಿಯತಮೆಗೆ ಚಾಕು ಚುಚ್ಚಿ ವ್ಯಕ್ತಿಯೊಬ್ಬ ಹತ್ಯೆ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ತೇಜಸ್ವಿನಿ ಎಂಬಾಕೆಯೇ ಮೃತ ದುರ್ದೈವಿ. ಕೌಟುಂಬಿಕ ಕಲಹದ ಹಿನ್ನೆಲೆ ಆಕೆ ತನ್ನ ಇಬ್ಬರು ಮಕ್ಕಳ ಜೊತೆಗೆ ಏಕಾಂಗಿ ಜೀವನ ನಡೆಸುತ್ತಿದ್ದಳು. ಇದೀಗ ಆಕೆಯ ಸಾವಿನಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ.
ಕೊಲೆಗಾರ ಆರೋಪಿಯನ್ನು ಸಂದೀಪ್ ಎಂದು ಗುರುತಿಸಲಾಗಿದೆ.
ತೇಜಸ್ವಿನಿ ಹೊಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡು ಅವರೇ ನೀಡಿದ ಕೋಣೆಯಲ್ಲಿ ತನ್ನಿಬ್ಬರು ಮಕ್ಕಳನ್ನು ಸಾಕಿಕೊಂಡು ದಿನ ದೂಡುತ್ತಿದ್ದಳು. ಈ ವೇಳೆ ಸಂದೀಪ್ ಎಂಬಾತ ಆಕೆಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾನೆ. ಕಳೆದ ಒಂದು ತಿಂಗಳ ಹಿಂದೆ ಇವರಿಬ್ಬರೂ ಬೇರೆ ಮನೆ ಮಾಡಿ ಸಂಸಾರ ಆರಂಭ ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಇವರಿಬ್ಬರೂ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ವೇಳೆ ಸಂದೀಪ್ ಮದ್ಯ ಸೇವಿಸಿ ಬಂದಿದ್ದು, ತೇಜಸ್ವಿನಿ ಜೊತೆ ಜಗಳವಾಡಿದ್ದಾನೆ. ಆಕೆ ಆತನ ಮೇಲೆ ಹಲ್ಲೆ ಮಾಡಿದ್ದಾಳೆ. ಆಗ ಆತ ಆಕೆಯ ಹೊಟ್ಟೆಗೆ ಚಾಕು ಚುಚ್ಚಿದ್ದಾನೆ. ಆಕೆಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೊಲಿಗೆ ಹಾಕಿಸಲಾಗಿತ್ತು. ಮನೆಗೆ ಬಂದ ತೇಜಸ್ವಿನಿ ಮದ್ದು ಸೇವಿಸದೆ ಮದ್ಯ ಸೇವಿಸಿ ಮಲಗಿದ್ದಾಳೆ. ಇದರಿಂದ ಗಾಯ ಸೆಫ್ಟಿಕ್ ಆಗಿ ಹೊಟ್ಟೆಯೆಲ್ಲಾ ಇನ್‌ಫೆಕ್ಷನ್ ಆಗಿದೆ. ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಂಗಾಂಗ ವೈಫಲ್ಯದಿಂದ ಆಕೆ ಸಾವನ್ನಪ್ಪಿದ್ದಾಳೆ.
ಸಂದೀಪ್‌ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























