ಮಂಗಳೂರು: ಮುಂಬೈಯ ಸಿಸಿಬಿ ಪೊಲೀಸ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಮಂಗಳೂರಿನ ವ್ಯಕ್ತಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ 41.85 ಲಕ್ಷ ರೂ. ಲಪಟಾಯಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ
ಜ.31ರಂದು ಅಪರಿಚಿತ ವ್ಯಕ್ತಿ ನವದೆಹಲಿಯಿಂದ ಕರೆ ಮಾಡಿ ತನ್ನನ್ನು ಸಿಸಿಬಿ ಪೊಲೀಸ್ ಎಂದು ಪರಿಚಯಿಸಿಕೊಂಡು, ನಿಮ್ಮ ಗುರುತಿನ ಚೀಟಿ ಉಪಯೋಗಿಸಿಕೊಂಡು ಮುಂಬೈಯ ಕೆನರಾ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಲಾಗಿದೆ. ಅದರಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆಯುತ್ತಿದೆ. ಗುರುತಿನ ಚೀಟಿಯ ನಂಬರ್ ಉಪಯೋಗಿಸಿಕೊಂಡು ಮೊಬೈಲ್ ನಂಬರ್ ಪಡೆದುಕೊಳ್ಳಲಾಗಿದೆ. ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. ನಿಮ್ಮನ್ನು ಬಂಧಿಸಲಾಗುವುದು, ಬಂಧನಕ್ಕೆ ಸುಪ್ರಿಂ ಕೋರ್ಟ್ ವಾರಂಟ್ ಇದೆ ಎಂದು ಹೇಳಿ ವಾಟ್ಸ್‌ಆ್ಯಪ್ ಮೂಲಕ ವಿಡಿಯೋ ವಿಡಿಯೋ ಕಾಲ್‌ನಲ್ಲಿ ಬೆದರಿಸಿದ್ದಾನೆ.
ಮಗ ಮತ್ತು ಸೊಸೆಗೆ ತಿಳಿಸದಂತೆಯೂ ಹೆದರಿಸಿದ್ದ. ಬಳಿಕ ಎಲ್ಲ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕ್‌ನ ವಿವರಗಳನ್ನು ಪಡೆದುಕೊಂಡಿದ್ದ. ಬಂಧನದಿಂದ ಪಾರಾಗಬೇಕಾದರೆ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿದ್ದ. ಬ್ಯಾಂಕ್ ಖಾತೆಯಲ್ಲಿರುವ ಹಣದ ಪರಿಶೀಲನೆ ಮುಗಿಯುವವರೆಗೂ ಅದನ್ನು ವರ್ಗಾಯಿಸುವಂತೆ ತಿಳಿಸಿದ್ದ. ಅದರಂತೆ ತಾನು ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್ ಖಾತೆಗಳಿಗೆ ಫೆ.9ರಿಂದ ಫೆ.18ರವರೆಗೆ 41.85 ಲಕ್ಷ ರೂ. ವರ್ಗಾವಣೆ ಮಾಡಿರುವೆ ಎಂದು ಡಿಜಿಟಲ್ ಅರೆಸ್ಟ್‌ಗೊಳಗಾಗಿದ್ದ ವ್ಯಕ್ತಿ ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
























