ದೆಹಲಿಯ 20 ಪೊಲೀಸರನ್ನು ಬಂಧಿಸಿದ ಹಿಮಾಚಲ ಪ್ರದೇಶ ಪೊಲೀಸರು!

ಅರೆಬೆತ್ತಲೆ ಪ್ರಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಲು ಹೋದಾಗ ಗಡಿಯಲ್ಲಿ ಹೈಡ್ರಾಮಾ

ನವದೆಹಲಿ: ಎಐ ಶೃಂಗಸಭೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಲು ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದ ದಿಲ್ಲಿಯ 20 ಪೊಲೀಸ್ ಸಿಬ್ಬಂದಿಯನ್ನು ಶಿಮ್ಲಾ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಈ ಘಟನೆ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಎಐ ಇಂಪ್ಯಾಕ್ಟ್​ ಶೃಂಗಸಭೆಯಲ್ಲಿ ಶರ್ಟ್​ ಬಿಚ್ಚಿ ಪ್ರತಿಭಟನೆ ಮಾಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಪೈಕಿ ಮೂವರನ್ನು ಹಿಡಿಯಲು ದೆಹಲಿ ಪೊಲೀಸರು ಕಾಂಗ್ರೆಸ್‌ ಆಡಳಿತವಿರುವ ಹಿಮಾಚಲ ಪ್ರದೇಶಕ್ಕೆ ತೆರಳಿದಾಗ ಈ ಘಟನೆ ನಡೆದಿದೆ.

ಘಟನೆ ಚಂಡೀಗಢ-ಕಲ್ಕಾ-ಶಿಮ್ಲಾ ಹೆದ್ದಾರಿಯ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರು ಇಲ್ಲಿ ಮುಖಾಮುಖಿಯಾದರು. ಶೃಂಗಸಭೆಯ ಸಮಯದಲ್ಲಿ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಧರಿಸದೆ ಪ್ರತಿಭಟನೆ ನಡೆಸಿ ಶಿಮ್ಲಾ ಜಿಲ್ಲೆಯ ರೋಹ್ರು ಪ್ರದೇಶಕ್ಕೆ ಹೋಗಿ ಸ್ಥಳೀಯ ಹೋಟೆಲ್‌ನಲ್ಲಿ ತಂಗಿದ್ದರು ಎಂದು ಮಾಹಿತಿ ಸಿತ್ತಿತ್ತು. ದೆಹಲಿ ಪೊಲೀಸರು ಅವರ ಸ್ಥಳದ ಬಗ್ಗೆ ತಿಳಿದುಕೊಂಡು, ಒಂದು ಪೊಲೀಸ್‌ ತಂಡ ರೋಹ್ರುಗೆ ಆಗಮಿಸಿತ್ತು.





















































 
 

ಈ ಕಾರ್ಯಾಚರಣೆಯ ಬಗ್ಗೆ ಸೋಲನ್ ಪೊಲೀಸರು ಮಾಹಿತಿ ತಿಳಿದ ತಕ್ಷಣ ಧರ್ಮಪುರ ಬಳಿಯ ಚಂಡೀಗಢ-ಕಲ್ಕಾ-ಶಿಮ್ಲಾ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ದಿಗ್ಬಂಧನ ಹಾಕಿ ದೆಹಲಿ ಪೊಲೀಸ್ ತಂಡವನ್ನು ಇಲ್ಲಿಯೇ ತಡೆದರು. ಇದಲ್ಲದೆ, 20 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಯಿತು. ಇದು ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು ಮತ್ತು ಎರಡೂ ರಾಜ್ಯಗಳ ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು.

ಬಂಧಿತ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಶಿಮ್ಲಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅವರನ್ನು ಎಸಿಜೆಎಂ ನ್ಯಾಯಾಲಯ ಸಂಖ್ಯೆ 2ಕ್ಕೆ ಕರೆತರಲಾಯಿತು. ವಿಚಾರಣೆಯ ಸಮಯದಲ್ಲಿ ದೆಹಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಹಾಜರಿದ್ದರು.

ಮೂವರು ಆರೋಪಿಗಳನ್ನು ಸಾಗಿಸುತ್ತಿದ್ದಾಗ ದೆಹಲಿ ಪೊಲೀಸ್ ತಂಡವನ್ನು ಶಿಮ್ಲಾ ಪೊಲೀಸರು ತಡೆದಾಗ ಈ ವಾಗ್ವಾದ ನಡೆಯಿತು. ಶಿಮ್ಲಾ ಪೊಲೀಸರು ದೆಹಲಿ ಪೊಲೀಸ್ ಸಿಬ್ಬಂದಿ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿದ್ದು, ಅವರ ವಾಹನಗಳನ್ನು ವಶಕ್ಕೆ ಪಡೆದಿದ್ದರು. ವಾಗ್ವಾದ, ನೂಕಾಟ, ಅಪಹರಣ ಕೇಸ್‌ ದಾಖಲು ಮುಂತಾದ ಹೈದ್ರಾಮಾ ನಡೆದ ಬಳಿಕ ಕೊನೆಗೂ ದೆಹಲಿ ಪೊಲೀಸರು ಮೂವರು ಕಾಂಗ್ರೆಸ್‌ ಕಾರ್ಯಕರ್ತರಾದ ಸೌರಭ್‌ಮ ಸಿದ್ಧಾರ್ಥ್‌ ಮತ್ತು ಅರ್ಬಾಜ್‌ ಎಂಬವರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಈ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದ ಮಾನ ಹಾಳು ಮಾಡಲು ಪ್ರಯತ್ನಿಸಿದವರಿಗೆ ರಕ್ಷಣೆ ನೀಡುವುದು ‘ನಾಚಿಕೆಗೇಡಿನ’ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ.

ಫೆಬ್ರವರಿ 20ರಂದು ಭಾರತ್ ಮಂಟಪ್​ನಲ್ಲಿ ನಡೆಯುತ್ತಿದ್ದ ಎಐ ಶೃಂಗಸಭೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್​ ತೆಗೆದು ಪ್ರತಿಭಟನೆ ನಡೆಸಿದ್ದರು. ದೆಹಲಿ ಪೊಲೀಸರು ಇದುವರೆಗೆ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಉದಯ್ ಭಾನು ಚಿಬ್ ಸೇರಿದಂತೆ 11 ಜನರನ್ನು ಬಂಧಿಸಿದ್ದಾರೆ.

error: Content is protected !!
Scroll to Top