ಉಭಯ ತಂಡಗಳಿಗೂ ನಿರ್ಣಾಯಕ ಪಂದ್ಯ; ಟೀಂ ಇಂಡಿಯಾ ಮೇಲೆ ಭಾರಿ ಒತ್ತಡ
ಚೆನ್ನೈ : ಟಿ20 ವಿಶ್ವಕಪ್ ಮೊದಲ ಸೂಪರ್-8 ಪಂದ್ಯದಲ್ಲಿ ಇಂದು ಭಾರತ ಮತ್ತು ಜಿಂಬಾಬ್ವೆ ಚೆನ್ನೈಯಲ್ಲಿ ಮುಖಾಮುಖಿಯಾಗಲಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದ್ದು, ಈ ಸೋಲಿನಿಂದ ಟೀಂ ಇಂಡಿಯಾ ತನ್ನ ಸೆಮಿಫೈನಲ್ ಹಾದಿಯನ್ನು ದುರ್ಗಮ ಮಾಡಿಕೊಂಡಿದೆ.
ಟೀಂ ಇಂಡಿಯಾ ಸೆಮಿಫೈನಲ್‌ಗೇರಬೇಕೆಂದರೆ ಉಳಿದಿರುವ ಎರಡೂ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆಲ್ಲಬೇಕಿದೆ. ಅಂದರೆ ಬರೀ ಗೆದ್ದರೆ ಮಾತ್ರ ಸಾಲದು, ಭಾರಿ ಅಂತರದ ಗೆಲುವು ದಾಖಲಿಸಬೇಕು. ಬ್ಯಾಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಮೋಘವಾಗಿ ಅಡಿದರೆ ಮಾತ್ರ ಭಾರತಕ್ಕೆ ಉಳಿಗಾಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಟೀಂ ಇಂಡಿಯಾ ತನ್ನ ಎರಡನೇ ಸೂಪರ್ 8 ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಇಂದು ಆಡುತ್ತಿದೆ. ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿರುವ ಜಿಂಬಾಬ್ವೆ ತಂಡವನ್ನು ಟೀಂ ಇಂಡಿಯಾ ಕಡಿಮೆ ಅಂದಾಜು ಮಾಡುವಂತಿಲ್ಲ. ಟೀಂ ಇಂಡಿಯಾ ಸಾಂಘಿಕ ಪ್ರದರ್ಶನ ನೀಡಿದರೆ ಮಾತ್ರ ಮುಂದಿನ ಸುತ್ತಿಗೆ ತನ್ನ ಕನಸನ್ನು ಜೀವಂತವಾಗಿರಿಸಿಕೊಳ್ಳಬಹುದು. ಇಲ್ಲದಿದ್ದರೆ ತಂಡದ ಪಯಣ ಸೂಪರ್ 8 ಸುತ್ತಿನಲ್ಲೇ ಕೊನೆಗೊಳ್ಳಬಹುದು. ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಭಾರತ ಮತ್ತು ಜಿಂಬಾಬ್ವೆ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ ನಡೆಯಲಿದೆ. ಚೆನ್ನೈನಲ್ಲಿ ಈ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಎರಡೂ ತಂಡಗಳಿಗಿದೆ. ಮಳೆ ಬಂದರೆ ಭಾರತ ಸೆಮಿಫೈನಲ್ ರೇಸ್‌ನಿಂದ ಹೊರಬೀಳುವ ಸಾಧ್ಯತೆ ಹೆಚ್ಚು. ಚೆನ್ನೈ ಪಿಚ್ ಸ್ಪಿನ್ನರ್‌ಗಳಿಗೆ ಸವಾಲಾಗಿದ್ದು, ಭಾರತದ ಮೇಲೆ ಹೆಚ್ಚಿನ ಒತ್ತಡವಿದೆ. ಎರಡೂ ತಂಡಗಳು ಸೆಮಿಫೈನಲ್‌ಗೆ ತಲುಪಲು ಈ ಪಂದ್ಯ ನಿರ್ಣಾಯಕ.
ಟೀಂ ಇಂಡಿಯಾಗೆ ತವರಿನ ಮೈದಾನದ ಲಾಭ ಸಿಗಬಹುದು. ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳಿಗೆ ಜಿಂಬಾಬ್ವೆ ಆಘಾತ ನೀಡಿದೆ. ಆದ್ದರಿಂದ ಜಿಂಬಾಬ್ವೆಗೆ ಹೋಲಿಸಿದರೆ ಈ ಪಂದ್ಯದಲ್ಲಿ ಭಾರತ ಹೆಚ್ಚಿನ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ. ಚೆನ್ನೈ ಪಿಚ್‌ನಲ್ಲಿ ಆರಂಭದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ. ಆದರೆ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಟಾರ್ಗೆಟ್ ನಿರ್ಧಾರವಾಗುತ್ತದೆ. 2026ರ ಟಿ20 ವಿಶ್ವಕಪ್‌ನಲ್ಲಿ ಇಲ್ಲಿ ಇಲ್ಲಿಯವರೆಗೆ ಆರು ಪಂದ್ಯಗಳು ನಡೆದಿದ್ದು, ಬ್ಯಾಟ್ಸ್‌ಮನ್‌ಗಳು ಸ್ಪಷ್ಟವಾಗಿ ಪ್ರಾಬಲ್ಯ ಸಾಧಿಸಿದ್ದಾರೆ, ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳು ವಿಕೆಟ್ ಪಡೆಯುವುದು ಕಷ್ಟಕರವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವವರ ಸರಾಸರಿ ಸ್ಕೋರ್ 180 ರಿಂದ 200 ರನ್‌ಗಳವರೆಗೆ ಇದೆ. ಆದ್ದರಿಂದ, ಮೊದಲು ಬ್ಯಾಟಿಂಗ್ ಮಾಡುವ ತಂಡವು 200ಕ್ಕಿಂತ ಹೆಚ್ಚು ಸ್ಕೋರ್‌ಗೆ ಗುರಿಯಿಡಬೇಕು.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ.
ಜಿಂಬಾಬ್ವೆ: ಸಿಕಂದರ್ ರಝಾ (ನಾಯಕ), ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ಗ್ರೇಮ್ ಕ್ರೀಮರ್, ಬ್ರಾಡ್ಲಿ ಇವಾನ್ಸ್, ಕ್ಲೈವ್ ಮದಂಡೆ, ಟಿನೊಟೆಂಡಾ ಮಪೋಸಾ, ತಡಿವಾನಾಶೆ ಮರುಮಾನಿ, ವೆಲ್ಲಿಂಗ್ಟನ್ ಮಸಕಡ್ಜಾ, ಟೋನಿ ಮುನ್ಯೊಂಗಾ, ತಶಿಂಗಾ ಮುಸೆಕಿವಾ, ಬ್ಲೆಸ್ಸಿಂಗ್ ಮುಜರಾಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗರಾವ, ಬ್ರೆಂಡನ್ ಟೇಲರ್.
























