ಬೆಂಗಳೂರು: ಮನೆಯ ಬಾಗಿಲ ಬೀಗ ಮುರಿದ ಕಳ್ಳರು ಸುಮಾರು ಅರ್ಧ ಕೆ.ಜಿ. ಗಳಷ್ಟು ಚಿನ್ನ ದರೋಡೆ ಮಾಡಿರುವ ಘಟನೆ ರಾಮನಗರ ಟೌನ್‌ನ ದ್ಯಾವರಸೇಗೌಡನದೊಡ್ಡಿ ಎಂಬಲ್ಲಿ ನಡೆದಿದೆ.
ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಲಿಖಿತ್ ಎಂಬವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿರುವುದಾಗಿದೆ.
ಲಿಖಿತ್ ಅವರ ಮನೆಯಲ್ಲಿ ಯಾರೂ ಇಲ್ಲದೇ ಇರುವ ಸಂದರ್ಭವನ್ನು ಬಳಸಿಕೊಂಡ ಖದೀಮರು, ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಸಂಜೆಯ ವೇಳೆಗೆ ಲಿಖಿತ್ ಅವರು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಬೀಗ ಮುರಿದಿರುವುದು ಕಂಡ ಅವರು ತಕ್ಷಣವೇ ಹೋಗಿ ಕಪಾಟು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಚಿನ್ನ ಕಳ್ಳತನವಾಗಿರುವುದು ತಿಳಿದು ಬಂದಿದೆ.
ಚಿನ್ನಾಭರಣದ ಜೊತೆಗೆ ಸಿಸಿಟಿವಿಯ ಡಿವಿಆರ್ ಅನ್ನು ಸಹ ಕಳ್ಳರು ಹೊತ್ತೊಯ್ದಿದ್ದಾರೆ.
ರಾಮನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಅಕ್ಕಪಕ್ಕದ ಮನೆಯವರ ಸಿಸಿಟಿವಿ ಪರಿಶೀಲಿಸಿರುವುದಾಗಿ ತಿಳಿದು ಬಂದಿದೆ.
























