ಮಂಗಳೂರು ನಗರದಲ್ಲೂ ಚಿರತೆ ಓಡಾಟ!

ಜನವಸತಿ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಆತಂಕ

ಮಂಗಳೂರು: ನಗರದ ಮರೋಳಿ ಮತ್ತು ಶಕ್ತಿನಗರ ಪರಿಸರದಲ್ಲಿ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಭಾನುವಾರ ಬೆಳಗ್ಗೆಯೂ ಚಿರತೆ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಫೆಬ್ರವರಿ 17ರಿಂದ ಶಕ್ತಿನಗರ, ಮರೋಳಿ ಮತ್ತು ಹತ್ತಿರದ ರೈಲ್ವೆ ಹಳಿ ಬಳಿ ಪ್ರತಿದಿನ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಶಕ್ತಿನಗರದ ಮನೆಯೊಂದರ ಕಾಂಪೌಂಡ್ ಒಳಗೆ ಚಿರತೆಯು ಗೇಟ್ ಮೂಲಕ ಪ್ರವೇಶಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಸತಿ ಪ್ರದೇಶದಲ್ಲಿ ಚಿರತೆ ಇರುವುದು ಖಚಿತವಾಗಿದೆ. ಮುಂಜಾನೆ ಕುಲಶೇಖರ ಚರ್ಚ್‌ಗೆ ತೆರಳುವವರು ಈ ಭಾಗದಲ್ಲಿ ಚಿರತೆಯನ್ನು ಕಂಡಿದ್ದು, ಜನರಲ್ಲಿ ಭೀತಿ ಹೆಚ್ಚಾಗಿದೆ.





















































 
 

ನಂತೂರು ಸೂರ್ಯನಾರಾಯಣ ದೇವಸ್ಥಾನ ಮತ್ತು ಕುಲಶೇಖರ ಚರ್ಚ್ ಬಳಿ ಹಗಲು ಹೊತ್ತಿನಲ್ಲೇ ಚಿರತೆ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಚಿರತೆ ಸಂಚರಿಸುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಪಾದಚಾರಿಗಳು ಮತ್ತು ನಿವಾಸಿಗಳ ಜೀವಕ್ಕೆ ಅಪಾಯವಿರುವುದರಿಂದ, ಅರಣ್ಯ ಇಲಾಖೆಯು ಕೂಡಲೇ ಬೋನು ಇರಿಸಿ ಚಿರತೆಯನ್ನು ಸೆರೆಹಿಡಿಯಬೇಕು ಮತ್ತು ಜನರಲ್ಲಿರುವ ಭಯವನ್ನು ದೂರ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: Content is protected !!
Scroll to Top