ಕಲ್ಲು ತೂರಾಟದಿಂದ ಬೂದಿ ಮುಚ್ಚಿದ ಕೆಂಡದಂತಿರುವ ಬಾಗಲಕೋಟೆ
ಬಾಗಲಕೋಟೆ: ಶಿವಾಜಿ ಜಯಂತಿಯ ಮೆರವಣಿಗೆಮೇಲೆ ಮಸೀದಿಯಿಂದ ಕಲ್ಲು ಮತ್ತು ಚಪ್ಪಲಿ ತೂರಿದ ಘಟನೆಯ ಬಳಿಕ ಪ್ರಕ್ಷುಬ್ಧಗೊಂಡಿರುವ ಬಾಗಲಕೋಟೆಯಲ್ಲಿ ಮತ್ತೊಮ್ಮೆ ಶಿವಾಜಿ ಜಯಂತಿ ನಡೆಸಲು ನಿರ್ಧರಿಸಲಾಗಿದೆ. ಕಲ್ಲು ತೂರಾಟ ನಡೆದಿದ್ದ ಬಾಗಲಕೋಟೆಯ ಕಿಲ್ಲಾ ಓಣಿ ಸಹಜ ಸ್ಥಿತಿಗೆ ಬಂದಿದೆ. ಕೊತ್ತಲೇಶ್ವರ ದೇವಸ್ಥಾನ ಹಾಗೂ ಪಂಕಾ ಮಸೀದಿ ಆವರಣದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಆರಂಭವಾಗಿದೆ. ಈ ಬೆನ್ನಲ್ಲೇ ಹಿಂದೂ ಸರ್ವ ಸಮಾಜದ ಮುಖಂಡರು ಭಾನುವಾರ ನಡೆಸಿದ ಸಭೆಯಲ್ಲಿ ಮತ್ತೊಮ್ಮೆ ಶಿವಾಜಿ ಜಯಂತಿ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಫೆ.26ರಂದು ಶಿವಾಜಿ ಜಯಂತಿ ಆಚರಣೆಗೆ ನಿರ್ಧರಿಸಲಾಗಿದೆ. ಜೊತೆಗೆ ಕಲ್ಲುತೂರಾಟ ನಡೆಸಿದ ಆರೋಪಿಗಳ ಬಂಧನಕ್ಕೂ ಆಗ್ರಹಿಸಲಾಗಿದೆ.
ಫೆ.26ರಂದು ಅದೇ ಮಸೀದಿ ಎದುರು ಅದ್ಧೂರಿಯಾಗಿ ಶಿವಾಜಿ ಮಹಾರಾಜರ ಜಯಂತಿ ಆಚರಿಸೋಣ. ಅಕ್ರಮ ಮಸೀದಿಗಳ ಬಗ್ಗೆ ನಮ್ಮ ಹೋರಾಟ ಮುಂದುವರಿಸೋಣ ಎಂದು ರಾಜ್ಯಸಭಾ ಸಂಸದ ನಾರಾಯಣ್ ಸಾ ಭಂಡಗೆ ಹೇಳಿದ್ದಾರೆ.
ಶಿವಾಜಿ ಜಯಂತಿಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದ ಬಾಗಲಕೋಟೆಯ ಕಿಲ್ಲಾ ಓಣಿ ಸಹಜ ಸ್ಥಿತಿಗೆ ಬಂದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸೋಮವಾರ (ಫೆ.23) ನಡೆಯಬೇಕಿದ್ದ ಹಿಂದೂ ಸಮ್ಮೇಳನವನ್ನು ಮುಂದೂಡಲಾಗಿದೆ.
ಕಲ್ಲು ತೂರಾಟ ಹಾಗೂ ಚಪ್ಪಲಿ ಎಸೆತ ಪ್ರಕರಣ ಖಂಡಿಸಿ ಫೆ.26ರಂದು ಬಾಗಲಕೋಟೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಬಿಜೆಪಿ ಮುಖಂಡ ಅಶೋಕ ಲಿಂಬಾವಳಿ ಕರೆ ಕೊಟ್ಟಿದ್ದಾರೆ. ಬಾಗಲಕೋಟೆ ನಗರದ ಅಂಬಾ ಭವಾನಿ ದೇವಸ್ಥಾನದಿಂದ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಗೆ ಹಿಂದೂ ಜಾಗರಣ ವೇದಿಕೆ ರಾಜ್ಯ ಸಂಚಾಲಕ ಜಗದೀಶ್ ಕಾರಂತ್ ಅವರನ್ನು ಕರೆಸಲು ನಿರ್ಣಯಿಸಲಾಗಿದೆ.
























