ಹೆಂಡತಿ ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ

ಆರ್ಥಿಕ ಸಂಕಷ್ಟದಿಂದ ಘೋರ ಕೃತ್ಯ ಎಸಗಿರುವ ಅನುಮಾನ

ಲಖನೌ : ಉತ್ತರ ಪ್ರದೇಶದ ಕಾಸಗಂಜ್ ಜಿಲ್ಲೆ ಅಮಾಪುರದ ಕೋಟ್ವಾಲಿ ವ್ಯಾಪ್ತಿಯ ಏಟಾ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಇರುವ ಮನೆಯಲ್ಲಿ ಒಂದೇ ಕುಟುಂಬದ ಐವರ ಶವಗಳು ಪತ್ತೆಯಾಗಿವೆ. ಮೃತರನ್ನು ಸತ್ಯವೀರ್ ಅಲಿಯಾಸ್ ಶ್ಯಾಮವೀರ್ ‘ಫೌಜಿ’ (50), ಅವರ ಪತ್ನಿ ರಾಮಶ್ರೀ (48), ಪುತ್ರಿಯರಾದ ಪ್ರಾಚಿ (12) ಮತ್ತು ಅಮರವತಿ (10), ಹಾಗೂ ಪುತ್ರ ಗಿರೀಶ್ (9) ಎಂದು ಗುರುತಿಸಲಾಗಿದೆ. ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ ಸತ್ಯವೀರ್ ವೃತ್ತಿಯಲ್ಲಿ ವೆಲ್ಡರ್ ಆಗಿದ್ದು, ಕಳೆದ 2-3 ದಿನಗಳಿಂದ ಕುಟುಂಬದವರು ಮನೆಯಿಂದ ಹೊರಬಂದಿರಲಿಲ್ಲ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಮನೆ ಬಾಗಿಲು ಒಳಗಿನಿಂದ ಬೀಗ ಹಾಕಲ್ಪಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸತ್ಯವೀರ್ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಅವರ ಪತ್ನಿ ಮತ್ತು ಮೂವರು ಮಕ್ಕಳು ಹಾಸಿಗೆಯ ಮೇಲೆ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.





















































 
 

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ ಅಂಕಿತಾ ಶರ್ಮಾ, ಸತ್ಯವೀರ್ ಅಲಿಯಾಸ್ ಶ್ಯಾಮವೀರ್ ಮತ್ತು ಅವರ ಕುಟುಂಬವು 2-3 ದಿನಗಳಿಂದ ಹೊರಗೆ ಕಾಣಿಸದಿರುವ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕುಟುಂಬ ಮೃತಪಟ್ಟಿರುವುದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಫಾರೆನ್ಸಿಕ್ ತಂಡ ಮತ್ತು ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಾಥಮಿಕ ತನಿಖೆ ಆಧಾರದಲ್ಲಿ ಹೇಳುವುದಾದರೆ, ಕುಟುಂಬದ ಉಳಿದ ಸದಸ್ಯರನ್ನು ಹತ್ಯೆ ಮಾಡಿ ಬಳಿಕ ಸತ್ಯವೀರ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಹೀಗಿದ್ದರೂ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ ಆರ್ಥಿಕ ಸಂಕಷ್ಟವೇ ಈ ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಪೊಲೀಸರು ಪಂಚನಾಮೆ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ, ಶವಗಳನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

error: Content is protected !!
Scroll to Top