ಬೆಂಗಳೂರು: ಮಕ್ಕಳ ಮೊಬೈಲ್ ಫೋನ್ ಅಡಿಕ್ಷನ್ ಬಿಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಫೋನ್ ಬಿಡಿ, ಪುಸ್ತಕ ಹಿಡಿ’ ಅಭಿಯಾನ ನಡೆಸಲು ಆರಂಭಿಸಿದೆ.
ಮಕ್ಕಳು ಶಾಲೆಯಲ್ಲಿ ಇದ್ದಷ್ಟು ಸಮಯ ಫೋನ್‌ನಿಂದ ದೂರವಿರುತ್ತಾರೆ. ಆದರೆ ಮನೆಗೆ ಹೋದ ತಕ್ಷಣ ಫೋನಿನ ದಾಸರಾಗುವ ಮಕ್ಕಳೇ ಹೆಚ್ಚು. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಮೂಡಿಸಲು ಈ ಹೊಸ ಕ್ರಮಕ್ಕೆ ಮುಂದಾಗಿದೆ.
ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಿ, ಮೊಬೈಲ್ ಬಳಕೆ ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ಇದೊಂದು ಮಹತ್ವದ ಅಭಿಯಾನವಾಗಿದೆ. ಮಕ್ಕಳು ಯಾವೆಲ್ಲಾ ಕಾರಣಕ್ಕೆ ಮೊಬೈಲ್ ಬಳಕೆ ಹೆಚ್ಚಿಸುತ್ತಿದ್ದಾರೆ?, ಅವರನ್ನು ಮೊಬೈಲ್ ಭೂತದ ಕೈಯಿಂದ ಬಿಡಿಸಲು ಯಾವ ರೀತಿಯ ಆಟ-ಪಾಠಗಳ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದನ್ನು ತಿಳಿದು ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುವಲ್ಲಿಯೂ ಈ ಅಭಿಯಾನ ಪೂರಕವಾಗಲಿದೆ ಎನ್ನಬಹುದು.
























