ವಿಡಿಯೋ ಮಾಡಿ ಪೋರ್ನ್ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡುತ್ತಿದ್ದ ದಂಪತಿ
ಲಖನೌ: 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋ ಮಾಡಿ ಡಾರ್ಕ್‌ವೆಬ್ ಪೋರ್ನ್ ಸೈಟಿಗೆ ಮಾರಿದ ಪ್ರಕರಣದಲ್ಲಿ ದಂಪತಿಗೆ ಉತ್ತರ ಪ್ರದೇಶದ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಸಂತ್ರಸ್ತ ಮಕ್ಕಳಲ್ಲಿ ಕೆಲವರು ಮೂರು ವರ್ಷ ವಯಸ್ಸಿನವರಾಗಿದ್ದಾರೆ. ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಪೋಕ್ಸೊ ಕಾಯ್ದೆಯ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ಆರೋಪಿಗಳಾದ ಉತ್ತರ ಪ್ರದೇಶ ಚಿತ್ರಕೂಟದ ರಾಮಭವನ್ ಮತ್ತು ಆತನ ಪತ್ನಿ ದುರ್ಗಾವತಿಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಹಲವಾರು ವಿಭಾಗಗಳ ಅಡಿಯಲ್ಲಿ ಶಿಕ್ಷೆಗೊಳಪಡಿಸಲಾಗಿದೆ. ರಾಮ್‌ಭವನ್ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ನೌಕರಿಯಲ್ಲಿದ್ದ.
ದೌರ್ಜನ್ಯಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಇದರ ಜೊತೆಗೆ ಆರೋಪಿಗಳ ಸೊತ್ತುಗಳನ್ನು ಮತ್ತು ಹಣವನ್ನು ಸಂತ್ರಸ್ತ ಮಕ್ಕಳಿಗೆ ಸಮಾನವಾಗಿ ಹಂಚಬೇಕು ಎಂದು ನ್ಯಾಯಾಲಯ ಹೇಳಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಸಿಬಿಐ 2020ರ ಅಕ್ಟೋಬರ್‌ನಲ್ಲಿ ರಾಮಭವನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿತು. ತನಿಖೆಯ ಸಮಯದಲ್ಲಿ, ಆರೋಪಿಗಳು ಲೈಂಗಿಕ ಅಪರಾಧಗಳನ್ನು ಮಾಡಿದ್ದಾರೆ ಎಂದು ಸಿಬಿಐ ಕಂಡುಹಿಡಿದಿದೆ. ಅಪರಾಧಗಳು ಅನಾಗರಿಕವಾಗಿದ್ದವು. ಸಂತ್ರಸ್ತೆಯರಲ್ಲಿ ಕೆಲವರ ಖಾಸಗಿ ಭಾಗಗಳಲ್ಲಿ ಗಾಯಗಳಾಗಿದ್ದವು. ಅವರಲ್ಲಿ ಕೆಲವರು ವರ್ಷಗಳ ಕಾಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.
ಆರೋಪಿಗಳು ಚಿತ್ರಕೂಟ, ಬಂಡಾ ಮತ್ತು ಸುತ್ತಮುತ್ತಲ ಪರಿಸರ 3ರಿಂದ 16 ವರ್ಷದ ಮಕ್ಕಳನ್ನು ಆಮಿಷಗಳನ್ನೊಡ್ಡಿ ಬಲೆಗೆ ಬೀಳಿಸಿಕೊಂಡು ಲೈಂಗಿಕವಾಗ ಬಳಸಿ ಅವುಗಳ ವಿಡಿಯೋ ಚಿತ್ರೀಕರಣ ಮಾಡಿ ಡಾರ್ಕ್‌ವೆಬ್ ಪೋರ್ಟನ್ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡುತ್ತಿದ್ದರು. ಆರು ವರ್ಷಗಳ ಹಿಂದೆ ಅವರ ಕೃತ್ಯ ಬೆಳಕಿಗೆ ಬಂದು ಸಿಬಿಐ ತನಿಖೆ ನಡೆಸಲಾಗಿತ್ತು.
























