ದೂರು ದಾಖಲಾದ ಮರುಕ್ಷಣವೇ ಬಂಧಿಸಿ, ಮನೆಗೆ ದಾಳಿ ಮಾಡಿರುವ ಪೊಲೀಸರು
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಸೈಟ್ ಕಬಳಿಕೆ ಪ್ರಕರಣದ ಮುಖ್ಯ ದೂರುದಾರರಾಗಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ದೂರು ನೀಡಿದ ಮರುಕ್ಷಣವೇ ಬಂಧಿಸಿದ್ದಲ್ಲದೆ ಅವರ ಮನೆಗೆ ದಾಳಿ ಮಾಡಿ ಶೋಧ ಕಾರ್ಯ ಮಾಡಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಬೆಂಗಳೂರು ಸಿಸಿಬಿ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆ ಹಿಂದೆ ಯಾರ ಕೈವಾಡ ಇದೆ ಎಂದು ಅನುಮಾನ ಈಗ ಉಂಟಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಇಷ್ಟು ತ್ವರಿತವಾಗಿ ಕಾರಯಾಚರಣೆ ನಡೆಸಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದುಕೊಂಡು ಸತತ 17 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ತನ್ನ ವಿರುದ್ಧ ಸ್ನೇಹಮಯಿ ಕೃಷ್ಣ ನಕಲಿ ಆಡಿಯೋ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆ ಎಂದು ಸಿಸಿಬಿಗೆ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಸ್ನೇಹಮಯಿ ಕೃಷ್ಣ ಕೋರ್ಟ್‌ಗೆ ಪ್ರಮುಖ ಆಡಿಯೋ ಮತ್ತು ದಾಖಲೆಗಳನ್ನು ಸಲ್ಲಿಸಲು ಸಿದ್ಧವಾಗಿದ್ದ ಸಮಯದಲ್ಲಿಯೇ ಬಂಧನವಾಗಿರುವುದು ಅನುಮಾನಗಳನ್ನು ಪುಷ್ಟೀಕರಿಸಿದೆ.
ಸ್ನೇಹಮಯಿ ಕೃಷ್ಣ ಮೂರು ಪ್ರಮುಖ ಆರೋಪಗಳನ್ನು ಮಾಡಿದ್ದರು. ಮುಡಾ ಮಾಜಿ ಆಯುಕ್ತ ನಟೇಶ್ ಬಡ್ತಿ ಪಡೆಯಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 1.60 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಣವನ್ನು ಸಾಗಿಸಲಾಯಿತು ಎನ್ನಲಾದ ಕಾರಿನ ಭಾವಚಿತ್ರವನ್ನೂ ಅವರು ಬಿಡುಗಡೆ ಮಾಡಿದ್ದರು. ಡಿ.ಬಿ. ನಟೇಶ್ ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಿದ್ದರು. ಕೇವಲ ಆರು ಸೆಕೆಂಡ್‌ಗಳ ‘ಟ್ರೈಲರ್’ ಬಿಡುಗಡೆ ಮಾಡಿದ್ದೇನೆ ಎಂದಿದ್ದ ಅವರು, ಪೂರ್ಣ ಆಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದರು. ಈ ಆಡಿಯೋದಲ್ಲಿ ನಟೇಶ್ ಅವರು ಹೇಗಾದರೂ ಮಾಡಿ ಸ್ನೇಹಮಯಿ ಕೃಷ್ಣ ಅವರನ್ನು ಸಂಪರ್ಕಕ್ಕೆ ತೆಗೆದುಕೊಳ್ಳುವಂತೆ ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಮೂರನೆಯದಾಗಿ ಲೋಕಾಯುಕ್ತದಲ್ಲಿ ಮುಡಾ ಪ್ರಕರಣದ ತನಿಖೆ ನಡೆಯುತ್ತಿದ್ದರೂ ಹಿಂದಿನ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ ನಟೇಶ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಟೇಶ್ ಲೋಕಾಯುಕ್ತರಿಗೂ ಲಂಚ ನೀಡಿದ್ದಾರೆ ಎಂದು ಆರೋಪಿಸಿ ಕೈಬರಹದ ದಾಖಲೆಯೊಂದನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದರು.
ಈ ಆರೋಪಗಳಿಗೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ಕೋರ್ಟ್‌ಗೆ ಆಡಿಯೋ ಹಾಗೂ ಇತರ ದಾಖಲಾತಿಗಳನ್ನು ಸಲ್ಲಿಸಲು ನಿನ್ನೆ ಸಿದ್ಧರಾಗಿದ್ದರು. ಆದರೆ ಕೋರ್ಟ್‌ಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸುವ ಮುನ್ನವೇ ಅವರನ್ನು ಬಂಧಿಸಲಾಯಿತು. ಇದು ನಟೇಶ್ರ ಆಡಿಯೋ ಕೋರ್ಟ್‌ಗೆ ತಲುಪುತ್ತದೆ ಎಂಬ ಭಯವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದ ನಂತರ ಮೈಸೂರಿನಲ್ಲಿರುವ ಅವರ ಎರಡು ಮನೆಗಳಲ್ಲಿ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ. ಮಧ್ಯಾಹ್ನದಿಂದ ರಾತ್ರಿಯವರೆಗೆ ನಡೆದ ಈ ಶೋಧ ಕಾರ್ಯದಲ್ಲಿ ಒಂದು ಪೆನ್‌ಡ್ರೈವ್, ಐಫೋನ್, ಸ್ವಿಚ್ ಆಫ್ ಆಗಿದ್ದ ಒಂದು ಫೋನ್, ಹಾರ್ಡ್ ಡಿಸ್ಕ್ ಮತ್ತು ಮೆಮೊರಿ ಕಾರ್ಡ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ನೇಹಮಯಿ ಕೃಷ್ಣ ಅವರು ವಿಚಾರಣೆ ವೇಳೆ ತಮ್ಮ ಆರೋಪಗಳನ್ನು ಸಮರ್ಥಿಸಿಕೊಳ್ಳುತ್ತಿದ್ದು, ನಟೇಶ್ ಅವರದ್ದೇ ಆಡಿಯೋ ಎಂದು ಸಿಸಿಬಿ ಮುಂದೆ ಹೇಳಿಕೆ ನೀಡಿದ್ದಾರೆ.
























