ಬೆಂಗಳೂರು: ತಮ್ಮ ಹೆಸರನ್ನು ಸವದತ್ತಿ ಎಲ್ಲಮ್ಮ ಎಂದು ಯಾಕೆ ಬದಲಾಯಿಸಿಕೊಳ್ಳಬಾರದು ಎಂದು ಇನ್ಸ್ಟಾಗ್ರಾಮ್ ಮೂಲಕ ಪ್ರಶ್ನೆ ಕೇಳಿದ ವ್ಯಕ್ತಿಗೆ ಸೂಕ್ತ ತಿರುಗೇಟು ನೀಡಿದ್ದಾರೆ ಗಾಯಕಿ ಸುಹಾನ ಸೈಯದ್.
ಸುಹಾನ ಅವರು ಇತ್ತೀಚೆಗಷ್ಟೇ ತಮ್ಮ ಹಿಂದೂ ಗೆಳೆಯನ ಜೊತೆಗೆ ಮಂತ್ರ ಮಾಂಗಲ್ಯದ ಮೂಲಕ ವಿವಾಹವಾಗಿದ್ದರು. ಆ ಬಳಿಕ ತಮ್ಮ ಪತಿಯ ಜೊತೆ ದೇವಾಲಯಗಳಿಗೆ ತೆರಳಿದ ಹಲವಾರು ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಇದರಿಂದಾಗಿ ಸುಹಾನಾಗೆ ವ್ಯಕ್ತಿಯೊಬ್ಬ ಇನ್ಸ್ಟಾ ಸೆಷನ್ನಲ್ಲಿ ಹೆಸರು ಬದಲಾವಣೆಯ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ತಕ್ಕ ಉತ್ತರ ನೀಡಿರುವ ಸುಹಾನ, ಅದಕ್ಕೆಯೇ ವಿದ್ಯೆ ಬೇಕು ಎಂದು ಹೇಳುವುದು. ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುವುದನ್ನು ನಂಬಲಾಗುವುದಿಲ್ಲ. ನಾನು ಸಹಾನುಭೂತಿ ಇರುವ ಧರ್ಮವನ್ನು ಗೌರವಿಸಿಕೊಂಡು ಬಂದಿದ್ದೇನೆ. ನಿಮ್ಮ ಧರ್ಮವನ್ನು ಗೌರವಿಸಿ, ಇನ್ನೊಂದು ಧರ್ಮವನ್ನು ಅವಹೇಳನ ಮಾಡುವುದು ಸರಿಯಾದ ಕ್ರಮ ಅಲ್ಲ. ಮೊದಲು ಒಳ್ಳೆಯ ಶಾಲೆಗೆ ಸೇರಿ ಒಳ್ಳೆಯ ಬುದ್ಧಿ ಕಲಿಯಿರಿ ಎಂದು ತಿರುಗೇಟು ನೀಡಿದ್ದಾರೆ.
























