ಪೊಲೀಸರ ತಕ್ಷಣದ ಸ್ಪಂದನೆಯಿಂದ ತಾಯಿ ಮಡಿಲು ಸೇರಿದ ಮಗು
ಬೆಂಗಳೂರು: ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ತಮ್ಮ ಮಗುವನ್ನೇ ಟ್ಯಾಕ್ಸಿಯಲ್ಲಿ ಮರೆತು ಬಿಟ್ಟುಹೋದ ಘಟನೆ ಬೆಂಗಳೂರಿನ ಹೆಣ್ಣೂರು ಸಮೀಪ ಪೊನ್ನಪ್ಪ ಲೇಔಟ್‌ನಲ್ಲಿ ನಡೆದಿದ್ದು, ಹೊಯ್ಸಳ ಪೊಲೀಸರ ತಕ್ಷಣದ ಸ್ಪಂದನೆಯಿಂದ ಮಗು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದೆ.
ಪೊನ್ನಪ್ಪ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ದಂಪತಿ ನಾಲ್ಕು ವರ್ಷದ ಮಗುವಿನೊಂದಿಗೆ ಫೆ.14ರಂದು ಹೊರ ಹೋಗಿದ್ದರು. ನಂತರ ಬಾಡಿಗೆ ಕ್ಯಾಬ್‌ನಲ್ಲಿ ಅಪಾರ್ಟ್‌ಮೆಂಟ್‌ಗೆ ವಾಪಸ್ ಬಂದಿದ್ದ ದಂಪತಿ, ನಿದ್ದೆ ಮಾಡುತ್ತಿದ್ದ ಮಗುವನ್ನು ಕ್ಯಾಬ್‌ನಲ್ಲೇ ಮರೆತು ಕೆಳಗಿಳಿದು ಹೋಗಿದ್ದರು. ಕ್ಯಾಬ್ ಚಾಲಕ ಸಹ ಹಿಂದಿನ ಸೀಟಿನಲ್ಲಿ ಮಲಗಿದ್ದ ಮಗುವನ್ನು ಗಮನಿಸದೆ ವಾಹನ ಚಾಲನೆ ಮಾಡಿಕೊಂಡು ಹೋಗಿದ್ದ.
ಫ್ಲಾಟ್‌ಗೆ ಮರಳಿದ ದಂಪತಿಗೆ ಸ್ವಲ್ಪ ಸಮಯದ ಬಳಿಕ ಮಗುವನ್ನು ಕ್ಯಾಬ್‌ನಲ್ಲೇ ಬಿಟ್ಟು ಬಂದಿರುವುದು ಗೊತ್ತಾಗಿ ಆತಂಕಗೊಂಡರು. ನಂತರ ದಂಪತಿ ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ತಕ್ಷಣವೇ ಕರೆ ಮಾಡಿ ವಿಷಯ ತಿಳಿಸಿದ್ದರು. ಸಹಾಯವಾಣಿ ಸಿಬ್ಬಂದಿ ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಹೊಯ್ಸಳ ಪೊಲೀಸರು, ಕ್ಯಾಬ್‌ನ ನೋಂದಣಿ ಸಂಖ್ಯೆ ಹಾಗೂ ಬುಕ್ಕಿಂಗ್ ವಿವರ ಆಧರಿಸಿ ಚಾಲಕನ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿ ಕರೆ ಮಾಡಿದ್ದಾರೆ.
ಹೊಯ್ಸಳ ಪೊಲೀಸರ ಕರೆಯ ನಂತರ ಕ್ಯಾಬ್ ಚಾಲಕ ವಾಹನ ನಿಲ್ಲಿಸಿ, ಹಿಂದಿನ ಸೀಟಿನಲ್ಲಿ ಪರಿಶೀಲಿಸಿದಾಗ ಮಗು ಮಲಗಿರುವುದು ಗೊತ್ತಾಗಿದೆ. ಆತ ಪೊಲೀಸರ ಸೂಚನೆಯಂತೆ ಪೊನ್ನಪ್ಪ ಲೇಔಟ್‌ನ ಅಪಾರ್ಟ್‌ಮೆಂಟ್ ಬಳಿ ವಾಪಸ್ ಬಂದು ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾನೆ. ಮಗುವನ್ನು ಕ್ಯಾಬ್‌ನಲ್ಲಿ ಬಿಟ್ಟು ಬಂದು ಆತಂಕದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಚಡಪಡಿಸಿದ್ದ ಪೋಷಕರು ಕೊನೆಗೆ ನಿಟ್ಟುಸಿರು ಬಿಟ್ಟಿದ್ದಾರೆ.
























