ಗುಂಡಿ ತೋಡಿ ಕಾರನ್ನು ಸಮಾಧಿ ಮಾಡಿ ಕಾಂಕ್ರೀಟ್ ಹಾಕಿದ ಮುಚ್ಚಿದ ತಂದೆ
ಮಾಸ್ಕೊ: ಪುತ್ರನ ಸಾವಿನ ಶೋಕದಲ್ಲಿದ್ದ ತಂದೆ ಮಗನಿಗೆ ಬರ್ತ್ಡೇ ಗಿಫ್ಟ್ ಆಗಿ ನೀಡಿದ್ದ 6 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರನ್ನು ಸಮಾಧಿ ಮಾಡಿರುವ ಘಟನೆ ರಷ್ಯಾದ ಮಾಸ್ಕೊದಲ್ಲಿ ನಡೆದಿದೆ. ಈ ಭಾವನಾತ್ಮಕ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವ್ಯಕ್ತಿಯ ಈ ನಿರ್ಧಾರದ ಬಗ್ಗೆ ಪರ-ವಿರೋಧದ ಕಾಮೆಂಟ್ಗಳು ಹರಿದುಬರುತ್ತಿವೆ.
ತಂದೆ ತನ್ನ ಮಗನಿಗೆ ಬರ್ತ್ಡೇ ಗಿಫ್ಟ್ ಆಗಿ ಬಿಎಂಡಬ್ಲ್ಯೂ ಕಾರು ನೀಡಿದ್ದರು. ಆದರೆ ಹುಟ್ಟುಹಬ್ಬ ಆಚರಿಸಿದ ಕೆಲವೇ ದಿನಗಳ ನಂತರ ಮಗ ಮೃತಪಟ್ಟಿದ್ದಾನೆ. ಆ ಕಾರು ನೋಡಿದಾಗಲೆಲ್ಲ ಪುತ್ರನನ್ನು ನೆನೆದು ತಂದೆ ಶೋಕಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾರನ್ನು ಸಮಾಧಿ ಮಾಡಿದ್ದಾರೆ. ದೊಡ್ಡ ಗುಂಡಿ ತೋಡಿ ಕಾರನ್ನು ಕ್ರೇನ್ ಮೂಲಕ ಅದರೊಳಗೆ ಇಳಿಸಿ ಕಾಂಕ್ರೀಟ್ ಹಾಕಿ ಮುಚ್ಚಿರುವ ವಿಡಿಯೋ ಕೋಟಿಗಟ್ಟಲೆ ಮಂದಿಯ ನಾನಾ ಪ್ರತಿಕ್ರಿಯೆಗೆ ಕಾರಣವಾಗಿದೆ.
ವ್ಯಕ್ತಿಯ ನಡೆಗೆ ಅನೇಕ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಆ ಕಾರನ್ನು ಮಾರಿ ಬಂದ ಹಣವನ್ನು ಯಾವುದಾದರೂ ದತ್ತಿ ಸಂಸ್ಥೆಗಳಿಗೆ ನೀಡಬಹುದಿತ್ತು ಎಂದು ಕೆಲವರು ಹೇಳಿದ್ದಾರೆ. ಕಾರನ್ನು ಮಾರಾಟ ಮಾಡಿ ಆ ಹಣವನ್ನು ನಿರ್ಗತಿಕರಿಗೆ ದಾನ ಮಾಡಬಹುದಿತ್ತು ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ಈ ನಿರ್ಧಾರ ಸರಿಯೋ ತಪ್ಪೋ ಎಂಬುದನ್ನು ಚರ್ಚಿಸಬಹುದು, ಆದರೆ ಮಗನನ್ನು ಕಳೆದುಕೊಂಡ ದುಃಖ ಆ ತಂದೆಗೆ ಮಾತ್ರ ಗೊತ್ತು. ಅದನ್ನು ಅಳೆಯಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಇನ್ನೂ ಕೆಲವರು ವ್ಯಕ್ತಿಯ ನಡೆ ತಪ್ಪಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
























