ಸುಳ್ಳು ಜಾಹೀರಾತು ಕೇಸ್‌ : ರಾಹುಲ್‌ ಗಾಂಧಿಗೆ ರಿಲೀಫ್‌

ತಾಂತ್ರಿಕ ಕಾರಣಗಳ ನೆಲೆಯಲ್ಲಿ ರಾಹುಲ್‌ ಗಾಂಧಿ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

ಬೆಂಗಳೂರು: ಸುಳ್ಳು ಜಾಹೀರಾತು ಪ್ರಕರಣದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಕರ್ನಾಟಕ ಹೈಕೋರ್ಟ್‌ ರಿಲೀಫ್‌ ನೀಡಿದೆ. ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

ತನ್ನ ವಿರುದ್ಧ ದಾಖಲಾಗಿರುವ ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿತು.





















































 
 

ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಅದರ ಮಾನಹಾನಿಯಾಗಿದ್ದರೆ ಪಕ್ಷದ ರಾಷ್ಟ್ರೀಯ ಪ್ರತಿನಿಧಿ ದೂರು ಸಲ್ಲಿಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ದೂರು ದಾಖಲಿಸುವ ಅಧಿಕಾರಯುತ ಪತ್ರವನ್ನು ಬಿಜೆಪಿಯ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷರು ಕಾರ್ಯದರ್ಶಿಗೆ ನೀಡಿದ್ದಾರೆ. ಹೀಗಾಗಿ ರಾಜ್ಯ ಘಟಕದ ಅಧ್ಯಕ್ಷರನ್ನು ರಾಷ್ಟ್ರೀಯ ಘಟಕದ ಅಧಿಕಾರಯುತ ಪ್ರತಿನಿಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ದೂರುದಾರರನ್ನು ಸಕ್ಷಮ ಪ್ರತಿನಿಧಿ ಅಲ್ಲದ ಕಾರಣ ವಿಚಾರಣೆ ಅಮಾನ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟು ಕೇಸ್‌ ರದ್ದುಗೊಳಿಸಿದೆ.

ಪ್ರಕರಣದಲ್ಲಿ ರಾಹುಲ್‌ ಗಾಂಧಿ 4ನೇ ಆರೋಪಿಯಾಗಿದ್ದು ಅವರ ವಿರುದ್ಧದ ವಿಚಾರಣೆ ಮಾತ್ರ ರದ್ದಾಗಿದೆ. ಇತರ ಆರೋಪಿಗಳಾಗಿರುವ ಕೆಪಿಸಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧದ ವಿಚಾರಣೆ ಮುಂದುವರಿಯಲಿದೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮುನ್ನಾದಿನದಂದು ಕಾಂಗ್ರೆಸ್ ಮಾಧ್ಯಮಗಳಲ್ಲಿ ಕರಪ್ಶನ್‌ ರೇಟ್‌ ಕಾರ್ಡ್‌ ಬಿಡುಗಡೆ ಮಾಡಿತ್ತು. ಕಾಂಗ್ರೆಸ್‌ ಪಕ್ಷದ ಜಾಹೀರಾತನ್ನು ರಾಹುಲ್‌ ಗಾಂಧಿ ಖಾತೆಯಿಂದ ಪೋಸ್ಟ್‌ ಮಾಡಲಾಗಿತ್ತು. ಬಿಜೆಪಿಯು ಸಾರ್ವಜನಿಕ ಕಾಮಗಾರಿಗಳ ನಿರ್ವಹಣೆಗಾಗಿ ಗುತ್ತಿಗೆದಾರರು ಮತ್ತು ಇತರರಿಂದ 40% ಕಮಿಷನ್ ಮಾಡುತ್ತಿದೆ ಎಂದು ಜಾಹೀರಾತುಗಳಲ್ಲಿ ಕಾಂಗ್ರೆಸ್ ಆರೋಪಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ತನ್ನ ಪಕ್ಷದ ಸದಸ್ಯರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕರು ಸುಳ್ಳು ಜಾಹೀರಾತನ್ನು ಪ್ರಕಟಿಸಿದೆ ಎಂದು ಕೇಶವ ಪ್ರಸಾದ್ ಅವರು ಸಿದ್ದರಾಮಯ್ಯ, ಶಿವಕುಮಾರ್ ಮತ್ತು ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ್ದರು.

error: Content is protected !!
Scroll to Top