ಕಾಸರಗೋಡು: ಕೆಲ ದಿನಗಳ ಹಿಂದಷ್ಟೇ ಜಿಲ್ಲೆಯ ಅಡೂರು ಮೂಲದ ಸೋಷಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಖ್ಯಾತಿಯ ರೇಷ್ಮಾ ಎಂಬಾಕೆ ಉಳಿಯತ್ತಡ್ಕದ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆಯ ಬೆನ್ನಲ್ಲೇ ಆಕೆಯ ಸ್ನೇಹಿತ ಸಂದೇಶ್ ಸಹ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಗಂಡನಿಂದ ಬೇರ್ಪಟ್ಟ ಬಳಿಕ ತನ್ನ ಸ್ನೇಹಿತ ಉಳಿಯತ್ತಡ್ಕದ ಸಂದೇಶ್ ಎಂಬಾತನ ಜೊತೆಗೆ ವಾಸವಿದ್ದಳು. ಇದೀಗ ಸಂದೇಶ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಉಳಿಯತ್ತಡ್ಕದ ಮನ್ನಿಪ್ಪಾಡಿಯಲ್ಲಿನ ತನ್ನ ಮನೆಯಲ್ಲಿ ಆತ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ರೇಷ್ಮಾ ಸಾವಿನ ಬಳಿಕ ಪೊಲೀಸರು ಸಂದೇಶ್‌ನನ್ನು ಸಹ ವಿಚಾರಣೆ ನಡೆಸಿದ್ದರು. ಆತನ ಬಂಧನಕ್ಕೂ ಸಿದ್ಧತೆ ನಡೆಸಿದ್ದರು. ಆದರೆ ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣದಿಂದ ಆತನನ್ನು ಬಂಧಿಸಿರಲಿಲ್ಲ. ಇದೀಗ ಸಂದೇಶ್ ಸಹ ಸಾವನ್ನಪ್ಪಿದ್ದು, ಈ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ಳುವಂತಾಗಿದೆ.
ರೇಷ್ಮಾ ಮೃತಳಾದ ಬಳಿಕ ಸಂದೇಶ್ ಸಹ ಮಾನಸಿಕ ಆಘಾತಕ್ಕೆ ಒಳಗಾಗಿದ್ದ. ರೇಷ್ಮಾ ಮತ್ತು ಸಂದೇಶ್ ಜೊತೆಯಲ್ಲೇ ವಾಸಿಸುತ್ತಿದ್ದ ಕಾರಣ ಆತನೊಂದಿಗಿನ ಜಗಳವೇ ಆಕೆಯ ಸಾವಿಗೆ ಕಾರಣವಾಗಿರುವ ಸಂದೇಹ ಸಹ ಇತ್ತು. ಈ ನೆಲೆಯಲ್ಲೂ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಆದರೆ ಇದೀಗ ಸಂದೇಶ್ ಸಹ ಮೃತಪಟ್ಟಿದ್ದು ಈ ಪ್ರಕರಣದಲ್ಲಿ ಮತ್ತೊಂದಷ್ಟು ಗೊಂದಲಗಳು ಸೃಷ್ಟಿಯಾಗಿದೆ ಎನ್ನುವುದು ಸುಳ್ಳಲ್ಲ.
























