ಬೆಳಗಾವಿಯ ಘಾಟಿಯಲ್ಲಿ ಇಂಥ ಘಟನೆಯೇ ನಡೆದಿಲ್ಲ ಎಂದು ತನಿಖೆಯಿಂದ ಸಾಬೀತು
ಬೆಳಗಾವಿ : ಕರ್ನಾಟಕ-ಗೋವಾ ಗಡಿಯಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಈಗ ದಿಢೀರ್ ತಿರುವು ಪಡೆದುಕೊಂಡಿದ್ದು, ಇಡೀ ಘಟನೆಯೇ ಸುಳ್ಳು ಎನ್ನುವ ಮಾಹಿತಿ ಹೊರಬಿದ್ದಿದೆ. ಘಟನೆ ಕಟ್ಟುಕಥೆ ಎಂಬ ಅನುಮಾನಕ್ಕೆ ಬಲವಾದ ಪುರಾವೆ ಸಿಕ್ಕಿದೆ.
ಬೆಳಗಾವಿ ಸಮೀಪದ ಗಡಿ ಪ್ರದೇಶದಲ್ಲಿ ಹಣ ಸಾಗಿಸುತ್ತಿದ್ದ ಎರಡು ಕಂಟೇನರ್ಗಳನ್ನು ದರೋಡೆ ಮಾಡಲಾಗಿದೆ ಎಂದು ನೀಡಿದ್ದ ದೂರಿನ ಮೇಲೆ ಮಹಾರಾಷ್ಟ್ರ ಸರ್ಕಾರ ಎಸ್ಐಟಿ ರಚಿಸಿ ತನಿಖೆ ನಡೆಸಿತ್ತು. ಸುಮಾರು ಒಂದು ತಿಂಗಳ ಕಾಲ ತನಿಖೆ ನಡೆಸಿದ ಎಸ್ಐಟಿ ತಂಡ ಬೆಳಗಾವಿ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಬಳಿ ದರೋಡೆ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ದೂರು ನೀಡಿದ್ದ ಸಂದೀಪ್ ಪಾಟೀಲ್ ಹೇಳಿಕೆಯಲ್ಲಿ ಸ್ಥಳ, ಸಮಯ, ಪ್ರಯಾಣ ಮಾರ್ಗ ಹಾಗೂ ಕರೆ ವಿವರಗಳಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ ಎಂಬುದು ಎಸ್ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ. ಇದರ ಆಧಾರವಾಗಿ ಚೋರ್ಲಾ ಘಾಟ್ನಲ್ಲಿ ಯಾವುದೇ ದರೋಡೆ ನಡೆದಿಲ್ಲ ಎಂದು ಎಸ್ಐಟಿ ಸ್ಪಷ್ಟಪಡಿಸಿದೆ. ಹೀಗಾಗಿ ಸಾಕ್ಷ್ಯಗಳ ಕೊರತೆಯಿಂದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ನ್ಯಾಯಾಲಯ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಪ್ರಕರಣ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಸುಳ್ಳು ದೂರು ನೀಡಿದ ಆರೋಪದ ಮೇಲೆ ಸಂದೀಪ್ ಪಾಟೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾಸಿಕ್ ಪೊಲೀಸರಿಂದ ಸಿದ್ಧತೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂದೀಪ್ ಪಾಟೀಲ್ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಭಾನುವಾರ ಪತ್ರ ಬರೆದು ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ಎಸ್ಐಟಿ ಪಾರದರ್ಶಕ ತನಿಖೆ ನಡೆಸುತ್ತಿಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳು ನನ್ನ ಬಳಿ ಇವೆ ಎಂದು ಅವರು ತಿಳಿಸಿದ್ದು, ಆ ದಾಖಲೆಗಳ ಆಧಾರದಲ್ಲಿ ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಬೆಳಗಾವಿಯ ಚೋರ್ಲಾ ಘಾಟ್ ಪ್ರದೇಶದಲ್ಲಿ ಕಳೆದ ಅಕ್ಟೋಬರ್ 25 ರಂದು ಎರಡು ಕಂಟೇನರ್ಗಳಲ್ಲಿದ್ದ ಸುಮಾರು 400 ಕೋಟಿ ರೂ. ನಗದು ಹಣವನ್ನು ದರೋಡೆ ಮಾಡಲಾಗಿತ್ತು ಎಂದು ಮಹಾರಾಷ್ಟ್ರದ ನಾಸಿಕ್ ಮೂಲದ ಉದ್ಯಮಿ ಸಂದೀಪ್ ದತ್ತಾ ಪಾಟೀಲ್ ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು. ಅವರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು ದೇಶಾದ್ಯಂತ ಸಂಚಲನ ಮೂಡಿಸಿತ್ತು. ದರೋಡೆಯಾದ ಹಣ ಗುಜರಾತ್ ಮೂಲದ ಬಿಲ್ಡರ್ ಕಿಶೋರ್ ಸವಲಾ ಸೇಠ್ ಅವರಿಗೆ ಸೇರಿದ್ದು, ಅದರಲ್ಲಿ ರದ್ದಾದ 2,000 ರೂ. ಮುಖಬೆಲೆಯ ನೋಟುಗಳೂ ಇದ್ದವು ಎನ್ನಲಾಗಿದೆ. ಆದರೆ ಇದೀಗ, ಅಂಥದ್ದೊಂದು ಪ್ರಕರಣ ನಡೆದಿರುವ ಸಾಧ್ಯತೆಯನ್ನೇ ಮಹಾರಾಷ್ಟ್ರ ಎಸ್ಐಟಿ ಅಲ್ಲಗಳೆದಿದೆ. ಜತೆಗೆ, ವರದಿಯನ್ನೂ ಸಿದ್ಧಪಡಿಸಿದೆ.
























