ಕುರ್ಚಿ ಕಿತ್ತಾಟದ ಮಧ್ಯೆ ಕೈಗೊಂಡ ವಿದೇಶ ಪ್ರವಾಸದಿಂದ ಸಂಚಲನ
ಬೆಂಗಳೂರು: ಒಂದೆಡೆ ಮುಖ್ಯಮಂತ್ರಿ ಕುರ್ಚಿಗಾಗಿ ತೀವ್ರ ಕಚ್ಚಾಟ ನಡೆಯುತ್ತಿರುವಂತೆಯೇ ಕೆಲವು ಕಾಂಗ್ರೆಸ್ ಶಾಸಕರ ಫಾರಿನ್ ಟೂರ್ ಫಿಕ್ಸ್ ಆಗಿದೆ. ಕಿತ್ತಾಟ ತಾರಕಕ್ಕೇರಿರುವಾಗಲೇ ಶಾಸಕರು ಔಿದೇಶ ಪ್ರವಾಸಕ್ಕೆ ಮುಂದಾಗಿರುವುದು ಸಂಚಲನ ಸೃಷ್ಟಿಸಿದೆ. ಹೈಕಮಾಂಡ್ ಹೇಳಿಕೆಗೂ ಡೋಂಟ್ ಕೇರ್ ಎಂದಿರುವ ಕಾಂಗ್ರೆಸ್ ಶಾಸಕರು ಸರ್ಕಾರದ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ಮುಂದಾಗಿದ್ದಾರೆ.
ಸುಮಾರು 27 ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ವಿದೇಶ ಪ್ರವಾಸಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಶಾಸಕರಾದ ಪುಟ್ಟರಂಗಶೆಟ್ಟಿ, ರಾಘವೇಂದ್ರ ಹಿಟ್ನಾಳ್, ಬಿ.ಎಂ ನಾಗರಾಜು, ಯಶವಂತರಾಯಗೌಡ ಪಾಟೀಲ್, ಅನಿಲ್ ಚಿಕ್ಕಮಾಧು, ಜೆ.ಟಿ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬನವನಗೌಡ ದದ್ದಲ್, ಎ.ಆರ್ ಕೃಷ್ಣಮೂರ್ತಿ, ತುರವೀಹಾಳ್, ಬಿ.ಬಿ ಚಿಮ್ಮನಕಟ್ಟಿ, ಬಿ.ಆರ್ ಪಾಟೀಲ್, ರಘು ಮೂರ್ತಿ ಹಾಗೂ ಪರಿಷತ್ ಸದಸ್ಯ ಶಿವಕುಮಾರ್ ಸೇರಿ ಹಲವರು ವಿದೇಶಿ ಪ್ರವಾಸದ ತಂಡದಲ್ಲಿದ್ದಾರೆ.
ಫೆಬ್ರವರಿ 17ರಂದು ವಿದೇಶ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೊದಲು ಪ್ರವಾಸ ಕೈಗೊಳ್ಳುವ ಶಾಸಕರ ಸಂಖ್ಯೆ 35ಕ್ಕೆ ಇಳಿಕೆ ಮಾಡಲಾಗಿತ್ತು. ಇದೀಗ 20ಕ್ಕೆ ಇಳಿದಿದೆ, 6-7 ಪರಿಷತ್ ಸದಸ್ಯರು ಪ್ರವಾಸಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
























