ಅಜ್ಜಿಯ ತಿಥಿ ಕಾರ್ಯಕ್ಕೆ ಆಮೆ ಮಾಂಸ ಮಾಡಲು ಮುಂದಾಗಿದ್ದ ಆರೋಪಿಗಳು
ಬೆಳ್ತಂಗಡಿ : ನದಿಯಲ್ಲಿ ಆಮೆಗಳನ್ನು ಹಿಡಿದು ಸುಟ್ಟು ಬೇಯಿಸುತ್ತಿದ್ದ ನಾಲ್ಕು ಮಂದಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ತಿಥಿ ಕಾರ್ಯಕ್ರಮಕ್ಕೆ ಪದಾರ್ಥ ಮಾಡಿ ಬಡಿಸಲು ಅಜ್ಜಿಗೆ ಇಷ್ಟವಾದ ಆಮೆಯನ್ನು ಸಂಬಂಧಿಕರು ನದಿಯಲ್ಲಿ ಅಕ್ರಮವಾಗಿ ಹಿಡಿದು ನದಿ ದಡದಲ್ಲೇ ಮಾಂಸ ಮಾಡಿ ಸುಡಲು ಯತ್ನಿಸುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.
ಬೆಳ್ತಂಗಡಿ ನಗರದ ಸೋಮವತಿ ನದಿಯಲ್ಲಿ ನಾಲ್ಕು ಆಮೆಯನ್ನು ಹಿಡಿದು ನದಿ ಬದಿಯಲ್ಲಿ ಮಾಂಸ ಮಾಡಲು ಪ್ರಯತ್ನಿಸುತ್ತಿರುವಾಗ ಫೆ.14ರಂದು ಸಂಜೆ 3.30ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಂ ನೇತೃತ್ವದ ತಂಡ ದಾಳಿ ಮಾಡಿ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ನಾಲ್ಕು ಸುಟ್ಟ ಆಮೆಯನ್ನು ಜಪ್ತಿ ಮಾಡಿ ಮುಂದಿನ ತನಿಖೆಗಾಗಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್ ನೀಡಿ ಫೆ.14ರಂದು ರಾತ್ರಿ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.
























