ಗೂಗಲ್‌ ಮ್ಯಾಪ್‌ ನಂಬಿ ಗುಂಡಿಗೆ ಬಿದ್ದ ಕಾರು

ಹೆದ್ದಾರಿ ಬಿಟ್ಟು ಒಳ ರಸ್ತೆಗಳಲ್ಲಿ ಹೋಗಿ ಅಪಘಾತ

ಉಡುಪಿ: ಗೂಗಲ್‌ ಮ್ಯಾಪ್‌ ಎಡವಟ್ಟಿನಿಂದ ಕಾರೊಂದು ಹೊಳೆಗೆ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಘಟನೆ ಶುಕ್ರವಾರ ರಾತ್ರಿ ಕೋಟ ಸಾೖಬ್ರಕಟ್ಟೆ ಮುಖ್ಯ ರಸ್ತೆಯ ಉಪ್ಲಾಡಿ ಹೊಳೆ ಬದಿಯಲ್ಲಿ ಸಂಭವಿಸಿದೆ.

ಕೇರಳ ಮೂಲದ ಕುಟುಂಬವೊಂದು ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುತ್ತಿದ್ದ ವೇಳೆ ಗೂಗಲ್‌ ಮ್ಯಾಪ್‌ ತೋರಿದ ಡೈವರ್ಶನ್‌ ಅನುಸರಿಸಿ ಬ್ರಹ್ಮಾವರ ಬಳಿ ಬಾರಕೂರು ಮಾರ್ಗವಾಗಿ ಸಾೖಬ್ರಕಟ್ಟೆ ಮೂಲಕ ಕೋಟದತ್ತ ಸಾಗಿತ್ತು.





















































 
 

ಉಪ್ಲಾಡಿ ಹೊಳೆ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ಹೊಳೆ ಬದಿಯ ಸಿಮೆಂಟ್‌ ಪಿಲ್ಲರ್‌ ಮೇಲೆ ಹತ್ತಿ ನಿಂತಿದೆ. ಹೊಳೆಗೆ ಕೇವಲ ಒಂದು ಅಡಿ ಅಂತರದಲ್ಲಿ ಕಾರು ನಿಂತಿದ್ದರಿಂದ ಭಾರಿ ದುರಂತ ತಪ್ಪಿದಂತಾಗಿದೆ.
ಕಾರಿನಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್‌ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

error: Content is protected !!
Scroll to Top