ಮದುವೆಗೆ ಬಂದ ವಿವಾಹಿತ ಮಹಿಳೆ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌

ಗಂಡನ ಸ್ನೇಹಿತನ ಮನೆಯಲ್ಲಿ ಎರಡು ದಿನದಿಂದ ಇದ್ದಾಕೆಯನ್ನು ಪತ್ತೆಹಚ್ಚಿದ ಪೊಲೀಸರು

ಬೆಂಗಳೂರು: ಮದುವೆಗೆ ಬಂದಿದ್ದ ಮಹಿಳೆ ಕಾಣೆಯಾಗಿ ಇಡೀ ರಾಜ್ಯದ ಗಮನ ಸೆಳೆದಿದ್ದ ಹಾಸನ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗುರುವಾರ ರಾತ್ರಿ ಕಾಣೆಯಾಗಿದ್ದ ಮಹಿಳೆ ಕುಣಿಗಲ್​ನಲ್ಲಿ ಪತ್ತೆ ಆಗಿದ್ದಾಳೆ. ಪತಿಯ ಸ್ನೇಹಿತನ ಮನೆಯಲ್ಲಿಯೇ ಮಹಿಳೆ ಸಿಕ್ಕಿದ್ದು, ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು ಎನ್ನಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಕುಣಿಗಲ್​​ನ ಗೊಟ್ಟಿಕೆರೆಯಲ್ಲಿ ಡೇವಿಡ್ ಎಂಬಾತನ ಮನೆಯಲ್ಲಿ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದು, ಡೇವಿಡ್​​ ಮನೆಯಲ್ಲಿಯೇ ಪ್ರಿಯಾಂಕಾ ಎರಡು ದಿನಗಳಿಂದ ವಾಸವಿದ್ದಳು ಎನ್ನಲಾಗಿದ್ದು, ಅನೈತಿಕ ಸಂಬಂಧ ಶಂಕೆ ವ್ಯಕ್ತವಾಗಿದೆ.





















































 
 

ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಸೀನ್ ಕ್ರಿಯೇಟ್​​ ಮಾಡಿ ಪ್ರೀಯಾಂಕಾ ನಾಪತ್ತೆಯಾಗಿದ್ದ ಹಿನ್ನೆಲೆ ಪ್ರಕರಣ ಬೇಲೂರು ಪೊಲೀಸರಿಗೆ ತಲೆನೋವು ತಂದಿತ್ತು. ಆದರೆ ಪೊಲೀಸರ ಸತತ ಪ್ರಯತ್ನದಿಂದ ಪತಿಯ ಸ್ನೇಹಿತನಾಗಿರುವ ಡೇವಿಡ್​​ ಮನೆಯಲ್ಲಿ ಕೊನೆಗೂ ಮಹಿಳೆಯ ಪತ್ತೆಯಾಗಿದ್ದಾಳೆ. ಕುಣಿಗಲ್ ಪಟ್ಟಣದ ಗೊಟ್ಟಿಕೆರೆಯಲ್ಲಿ ವಾಸವಾಗಿದ್ದ ಡೇವಿಡ್ ಪಟ್ಟಣದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ತನಿಖೆ ವೇಳೆ ಸಿಕ್ಕಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕಾ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆಂದು ಬಂದಿದ್ದು, ಬಳಿಕ ಕಾಣೆಯಾಗಿದ್ದಳು. ಫೆಬ್ರವರಿ 12ರ ರಾತ್ರಿ 8 ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ ಬೇಲೂರು ಬಸ್ ನಿಲ್ದಾಣದ ಬಳಿಯಿಂದ ಈಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ಘಟನೆಗೂ ಮುನ್ನ ಸಂಜೆ 7.30ರ ಸುಮಾರಿಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕಾ, ‘ಯಾರೋ ಒಬ್ಬರ ಜೊತೆಯಲ್ಲಿ ಸಿಕ್ಕಿದ್ದೇನೆ’ ಎಂದು ಹೇಳಿ ಫೋನ್ ಕಟ್ ಮಾಡಿದ್ದಳು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬೇಲೂರು ತಾಲೂಕಿನ ಕಲ್ಕೆರೆ ಸಮೀಪ ಮಹಿಳೆಯ ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಪ್ರಕರಣದ ಬಗ್ಗೆ ಮತ್ತಷ್ಟು ಸಂಶಯ ಮೂಡುವಂತೆ ಮಾಡಿತ್ತು. ಕಾಣೆಯಾಗುವ ವೇಳೆ ಆಕೆ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಧರಿಸಿದ್ದಳು. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿತ್ತು.

ಮಹಿಳೆಯ ಬಟ್ಟೆ, ಬ್ಯಾಗ್‌, ಚಪ್ಪಲಿ ಹೆದ್ದಾರಿ ಪಕ್ಕದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಕೊಲೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಖ್ಯಾತ ಮುಳುಗು ತಜ್ಞ ಈಶ್ವರ್‌ ಮಲ್ಪೆ ತಂಡದಿಂದ ಕೆರೆಯಲ್ಲಿ ಶೋಧ ನಡೆಸಲಾಯಿತು. ಇಡೀ ದಿನ ಶೋಧ ನಡೆಸಿದರೂ ಕೆರೆಯಲ್ಲಿ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ಉಡುಪಿಯಿಂದ ಆಗಮಿಸಿರುವ ತಜ್ಞರ ತಂಡದಿಂದ‌ ಕೆರೆಯಲ್ಲಿ ಶೋಧ ನಡೆಸಲಾಗಿತ್ತು.

error: Content is protected !!
Scroll to Top