ಬೆಂಗಳೂರು: ರಾಜ್ಯದಲ್ಲಿರುವ ಜನ ವಿರೋಧಿ, ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿವ ಗುರಿ ನಮ್ಮದು. ಸಿ ಎಂ ಸ್ಥಾನದ ಬಗ್ಗೆ ಚರ್ಚಿಸುವುದಕ್ಕಿಂತ ಜನಸ್ನೇಹಿ ಆಡಳಿತ ಅಧಿಕಾರಕ್ಕೆ ಬರಬೇಕು ಎನ್ನುವುದೇ ಮುಖ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮೈತ್ರಿ ಮಾಡಿಕೊಂಡು 113 ಸ್ಥಾನ ಗಳಿಸಿದರೆ ಸಿ ಎಂ ಆಗಬಹುದು ಎನ್ನುವುದಕ್ಕೆ ಉತ್ತರ ನೀಡಿದ ಅವರು, ಅದರ ಕುರಿತು ಈಗಲೇ ಮಾತನಾಡುವ ಅಗತ್ಯ ಇಲ್ಲ. ಇನ್ನೂ 2 ವರ್ಷ ಸಮಯ ಇದೆ. ನಮ್ಮ ಉದ್ದೇಶ ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಸರ್ಕಾರ ಅಧಿಕಾರಕ್ಕೆ ಬರಬೇಕು ಎನ್ನುವುದಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆ ಹಾಗೂ ಜಿಬಿಎ ಚುನಾವಣೆ ಕುರಿತು ಇನ್ನೂ ಯಾವುದೇ ಅಂತಿಮ ಚರ್ಚೆ ನಡೆದಿಲ್ಲ. ಸಮಯ ಬಂದಾಗ ಪಕ್ಷದೊಳಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು. ಮೈತ್ರಿ ವಿಷಯದಲ್ಲಿ ನಾವು ಮುಕ್ತವಾಗಿದ್ದೇವೆ, ಜನರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬುದು ನಮ್ಮ ನಿಲುವು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಬಗ್ಗೆ ವ್ಯಂಗ್ಯವಾಡಿದ ಅವರು, ಅಧ್ಯಯನಕ್ಕೆ ಹೋಗುವುದಾದರೆ ಹೋಗಲಿ, ಆದರೆ ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ಮುಖ್ಯ ಎಂದು ಕಿವಿಮಾತು ಹೇಳಿದ್ದಾರೆ.
























