ಕಾಂಗ್ರೆಸ್‌ ಸರ್ಕಾರಕ್ಕೆ ಸಾವಿರ ದಿನದ ಸಂಭ್ರಮ

ಕಚ್ಚಾಟ, ವಿವಾದ, ಸಂಘರ್ಷದ ಸುಳಿಯಲ್ಲೇ ಕಳೆದು ಹೋದ ಸಾವಿರ ದಿನಗಳು

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಾವಿರ ದಿನ ಪೂರೈಸಿದ ಸಂಭ್ರಮಾಚರಣೆಯಲ್ಲಿದೆ. 2023ರಲ್ಲಿ ಗ್ಯಾರಂಟಿ ಬಲದಿಂದ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಸರ್ಕಾರ ಆರಂಭದ ದಿನದಿಂದಲೂ ಸಂಘರ್ಷದಲ್ಲೇ ಕಳೆದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಮೊದಲ ದಿನದಿಂದ ಶುರುವಾದ ಕುರ್ಚಿ ಕಿತ್ತಾಟ ಈಗಲೂ ಮುಂದುವರಿದಿದೆ ಮಾತ್ರವಲ್ಲದೆ ಸಾವಿರ ದಿನ ಪೂರೈಸುವ ಸಂದರ್ಭದಲ್ಲೇ ತಾರಕ್ಕೇರಿರುವುದು ಗಮನಾರ್ಹ.

ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ತನ್ನ ಪಾತ್ರವೇ ಮುಖ್ಯ ಎಂದು ಭಾವಿಸಿರುವ ಶಿವಕುಮಾರ್‌ ಪಕ್ಷ ಬಹುಮತ ಗಳಿಸಿದಾಗ ಸಹಜವಾಗಿ ಮುಖ್ಯಮಂತ್ರಿ ಪಟ್ಟದ ಹಕ್ಕುದಾರನಾಗಿದ್ದರು. ಆದರೆ ಈ ನಡುವೆ ತನ್ನ ರಾಜಕೀಯ ದಾಳ ಉರುಳಿಸಿದ ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಂದಿನಿಂದಲೇ ಡಿಕೆಶಿ ಮುಖ್ಯಮಂತ್ರಿ ಪದವಿಗಾಗಿ ಕಸರತ್ತು ನಡೆಸುತ್ತಲೇ ಇದ್ದಾರೆ.





















































 
 

ಇದಲ್ಲದೆ ಸಿದ್ದರಾಮಯ್ಯ ಅವರ ಎರಡನೇ ಅವಧಿ ಎಂದರೆ ಸರ್ಕಾರದ ಸಾವಿರ ದಿನಗಳ ನಡಿಗೆಯಲ್ಲಿ ಸಾಧನೆಯ ಖುಷಿಗಿಂತ ಸಂಘರ್ಷದ ದುಗುಡವೇ ಹೆಚ್ಚು ಕಾಣಿಸುತ್ತಿದೆ. ಕುರ್ಚಿ ಕಚ್ಚಾಟ ಸರ್ಕಾರಕ್ಕೆ ಬಹಳಷ್ಟು ಕಳಂಕ ಹಚ್ಚಿದೆ. ಇದರ ಜೊತೆಗೆ ಸತತವಾಗಿ ಕಾಡುತ್ತಾ ಬಂದಿರುವ ವಿವಾದಗಳು ಸರ್ಕಾರದ ವರ್ಚಸ್ಸು ಮಂಕಾಗುವಂತೆ ಮಾಡಿವೆ.

ಇದೆಲ್ಲದರ ನಡುವೆ ಸರ್ಕಾರ ಸಾವಿರ ದಿನದ ಸಂಭ್ರಮದಲ್ಲಿದೆ. ಇಂದು ಹಾವೇರಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಟ್ಟದಾಟದ ನಡುವೆ, ಸಾವಿರ ದಿನದ ಸಂಭ್ರಮ ನಡೆಯುತ್ತಿದೆ. ಇಂದಿನ ಕಾರ್ಯಕ್ರಮದತ್ತ ಎಲ್ಲರ ಚಿತ್ತ ನೆಟ್ಟಿದೆ.

ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಬಂದ ಬಳಿಕ ಡಿಕೆಶಿ ವರಸೆ ಬಹಳಷ್ಟು ಬದಲಾಗಿದೆ. ಬೆಂಗಳೂರಲ್ಲಿ ಶನಿವಾರ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ ನಡೆಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ವೇದಿಕೆ ಮೇಲೆ ಅಕ್ಕಪಕ್ಕ ಕುಳಿತಿದ್ದರು. ಸಾಮಾನ್ಯವಾಗಿ ಅಕ್ಕಪಕ್ಕ ಕುಳಿತಿದ್ದಾಗ ಮಾತನಾಡುವುದು ಸಹಜ. ಆದರೆ, ಸಿಎಂ ಹಾಗೂ ಡಿಸಿಎಂ ತುಂಬಾ ಹೊತ್ತು ಮಾತನಾಡಲೇ ಇಲ್ಲ. ಕನಿಷ್ಠ ಪರಸ್ಪರ ಮುಖ ನೋಡುವ ಸಾಹಸಕ್ಕೂ ಕೈ ಹಾಕ್ಲಿಲ್ಲ.

ತುಂಬಾ ಹೊತ್ತಿನ ಬಳಿಕ ಇಬ್ಬರೂ ನದಿ ಮೂಲ ನಿರ್ವಹಣೆ ಪುಸ್ತಕದ ಬಗ್ಗೆ ಅನಿವಾರ್ಯವಾಗಿ ಮಾತನಾಡಿದರು. ಒಟ್ಟಾರೆಯಾಗಿ ಈ ಬೆಳವಣಿಗೆ ‘ಕೈ’ ಒಡಕಿಗೆ ಕನ್ನಡಿ ಹಿಡಿದಿದೆ. ಇದನ್ನು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದು, ದೆಹಲಿಯಿಂದ ರಾಜಕೀಯ ಗನ್ ಹಿಡಿದುಕೊಂಡು ಬಂದಿದ್ದಾರೆ ಎಂದು ಕುಟುಕಿದ್ದಾರೆ.

ಗುರುವಾರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮುಂದೆ ಹಕ್ಕು ಮಂಡಿಸಿ ವಾಪಸ್ ಆಗಿರುವ ಡಿಕೆಶಿ ನಂತರ ಕಾಲವೇ ಉತ್ತರಿಸುತ್ತದೆ ಎಂದಿದ್ದರು. ಇದರೊಂದಿಗೆ, ಫೆಬ್ರವರಿ 17ರ ನಂತರ ಗೇಮ್ ಪ್ಲ್ಯಾನ್ ಚೇಂಜ್ ಆಗಲಿದೆಯೇ ಎಂಬ ಚರ್ಚೆ ಗರಿಗೆದರಿದೆ.

ಹೈಕಮಾಂಡ್ ಮಧ್ಯಪ್ರವೇಶ ಮಾಡುತ್ತೆ ಎಂಬುದು ಡಿಕೆಶಿ ಹಾಗೂ ಬಣದ ವಿಶ್ವಾಸ. ಆದರೆ ಬಜೆಟ್‌ ದಿನಾಂಕ ಘೋಷಿಸಿ, ಲೆಕ್ಕಪತ್ರ ಮಂಡಿಸಲು ಸಜ್ಜಾಗಿರುವ ಸಿಎಂ ಮುಂದಿನ ಒಂದು ತಿಂಗಳು ಬ್ಯುಸಿ ಎಂಬ ಸಂದೇಶ ರವಾನಿಸಿದ್ದಾರೆ. ಈ ನಡುವೆ ಫೆಬ್ರವರಿ 17ರ ಬಳಿಕ ಇಬ್ಬರಿಗೂ ಹೈಕಮಾಂಡ್ ಬುಲಾವ್ ನೀಡುತ್ತದೆ ಎನ್ನಲಾಗಿದೆ.

ಎಐಸಿಸಿ ಮೂಲಗಳು ಕೊಟ್ಟ ಮಾಹಿತಿ ಪ್ರಕಾರ, ಸಚಿವರು, ನಾಯಕರನ್ನು ವರಿಷ್ಠರು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ. ಅಧಿಕಾರ ಹಂಚಿಕೆ ವಿಚಾರವಾಗಿ ಸಿಎಂ, ಡಿಸಿಎಂ ಜತೆ ಪ್ರತ್ಯೇಕವಾಗಿ ಮಾತನಾಡುವ ಸಾಧ್ಯತೆ ಇದೆ.

error: Content is protected !!
Scroll to Top