ತುಮಕೂರು: ಅಳಿಯ ಮತ್ತು ಮಗಳ ಜೊತೆಗೆ ವಾಸವಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರು ಹೃದಯಾಘಾತದಿಂದ ಸಾವನ್ನಪ್ಪಿಲ್ಲ ಬದಲಾಗಿ ಮಗಳೇ ಅವರನ್ನು ಹತ್ಯೆ ಮಾಡಿದ್ದಾಳೆ ಎನ್ನುವ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಸದ್ಯ ಆರೋಪಿ ಪುತ್ರಿ ಮತ್ತು ಆಕೆಯ ಪತಿ ಕ್ಯಾತಸಂದ್ರ ಪೊಲೀಸರ ವಶದಲ್ಲಿದ್ದಾರೆ.
ಬಂಡೇಪಾಳ್ಯ ಸಮೀಪದ ಶ್ರೀನಗರದ ಪುಷ್ಪಲತಾ ಅವರೇ ಮೃತ ದುರ್ದೈವಿ. ಮಗಳು ಸುಚಿತ್ರಾಳೇ ತನ್ನ ಪತಿ ಸುರೇಶ್ ಸಹಾಯದೊಂದಿಗೆ ಹೆತ್ತ ಅಮ್ಮನನ್ನೇ ಕೊಂದ ಪಾಪಿ.
ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದು, ಆರೇಪು ಸುಚಿತ್ರಾ ದೊಡ್ಡ ಕಥೆಯೊಂದನ್ನೇ ಈ ವೇಳೆ ಬಾಯ್ಬಿಟ್ಟಿದ್ದಾಳೆ. ಮೃತ ಮಹಿಳೆಯ ಪತಿ ಕೆಲ ಸಮಯದ ಹಿಂದಷ್ಟೇ ಮೃತಪಟ್ಟಿದ್ದರು. ತಂದೆಯ ಮೇಲೆ ಸುಚಿತ್ರಾಗೆ ಅಗಾಧ ಪ್ರೀತಿ ಇದ್ದು, ಅವರ ಸಾವಿನ ಬಳಿಕ ಆಕೆ ಜ್ಯೋತಿಷ್ಯರ ಬಳಿ ಹೋಗಿದ್ದಳು. ಆ ಜ್ಯೋತಿಷಿ ತಂದೆಯ ಸಾವಿಗೆ ನಿನ್ನ ತಾಯಿಯೇ ಕಾರಣ. ಮುಂದೆ ನಿನಗೂ ಇದೇ ಸ್ಥಿತಿ ಬರುತ್ತದೆ ಎಂದು ಆತ ಹೇಳಿದ್ದ. ಇದನ್ನು ನಂಬಿದ ಸುಚಿತ್ರಾ ಫೆ. 11 ರಂದು ರಾತ್ರಿ ವೇಳೆ ತನ್ನ ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಈ ವೇಳೆ ಅವರ ಮೇಲೆ ಹಲ್ಲೆ ಸಹ ಮಾಡಿದ್ದಳು ಎಂದು ತಿಳಿದು ಬಂದಿದೆ. ಆಕೆಯ ಗಂಡನಿಗೂ ಈ ಎಲ್ಲಾ ವಿವರಗಳು ಗೊತ್ತಿದ್ದು, ಆತ ಮೌನ ವಹಿಸಿದ್ದ ಎಂದು ತಿಳಿದು ಬಂದಿದೆ.
ಈ ಕೊಲೆಯ ಹಿಂದೆ ಹಣದ ವಿಷಯವೂ ಇರುವ ಸಾಧ್ಯತೆ ಇದ್ದು, ಆ ಆಯೇಮದಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಜಾಗ ಮಾರಿ ಲಕ್ಷಾಂತರ ರೂ. ಹಣವನ್ನು ಪುಷ್ಪಲತಾ ಮಗಳಿಗೆ ನೀಡದೆ ತನ್ನ ಬಳಿಯೇ ಇಟ್ಟುಕೊಂಡಿದ್ದರು. ಇದೇ ವಿಷಯದಲ್ಲಿ ಜಗಳ ನಡೆದು ಕೊಲೆ ಮಾಡಲಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.
ಇನ್ನು ಹೆತ್ತ ತಾಯಿಯನ್ನು ತಾನೇ ಕೊಂದು ಬಳಿಕ ಜನರೆದುರು ಆಕೆ ಹೃದಯಾಘಾತಕ್ಕೆ ಬಲಿಯಾಗಿದ್ದಾಗಿ ಹೇಳಿದ್ದ ಸುಚಿತ್ರಾ ಬೆಳ್ಳಬೆಳಗ್ಗೆಯೇ ತುಮಕೂರಿನ ಅನುಪಮಹಳ್ಳಿಯ ತಮ್ಮ ಸಂಬಂಧಿಕರ ಮನೆಗೆ ಶವ ತಂದು ಅಂತ್ಯಸಂಸ್ಕಾರ ಮಾಡಲು ಪ್ರಯತ್ನ ನಡೆಸಿದ್ದಾಳೆ. ಈ ಹಿಂದೆ ತಾಯಿ ಮತ್ತು ಮಗಳ ನಡುವೆ ನಡೆದಿದ್ದ ಜಗದ ವಿಷಯ ತಿಳಿದಿದ್ದ ಆಕೆಯ ಮನೆಯ ಸುತ್ತಮುತ್ತಲಿನ ಜನರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೊತೆಗೆ ಶವ ಸಂಸ್ಕಾರದ ಸಮಯದಲ್ಲಿ ಗಲಾಟೆ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪುಷ್ಪ ಅವರ ಸಾವಿನ ಅಸಲಿ ಸತ್ಯವನ್ನು ಬೇಧಿಸಿದ್ದಾರೆ.
























