4 ಸಾರಿಗೆ ನಿಗಮಗಳಿಂದ ಸ್ಮಾರ್ಟ್ ಕಾರ್ಡ್ ವಿತರಿಸಲು ತೀರ್ಮಾನ
ಬೆಂಗಳೂರು: ಸಾರಿಗೆ ಬಸ್ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯಲ್ಲಿ ತುಸು ಮಾರ್ಪಾಡು ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಮುಂದೆ ಆಧಾರ್ ಬದಲಿಗೆ ಶಕ್ತಿ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜತೆಗೆ, ಹಲವು ಮತ್ವದ ನಿರ್ಣಯಗಳನ್ನು ಕ್ಯಾಬಿನೆಟ್ನಲ್ಲಿ ಕೈಗೊಳ್ಳಲಾಗಿದೆ.
ಮಹಿಳೆಯರ ಉಚಿತ ಪ್ರಯಾಣಕ್ಕೆ 4 ಸಾರಿಗೆ ನಿಗಮಗಳು ಸ್ಮಾರ್ಟ್ಕಾರ್ಡ್ ವಿತರಿಸಲಿವೆ. ಶಕ್ತಿ ಸ್ಮಾರ್ಟ್ಕಾರ್ಡ್ ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರೊಂದಿಗೆ, ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುವುದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.
ಸರ್ಕಾರಿ ಶಾಲೆಗಳಲ್ಲಿ 1-10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ, 2 ಜೊತೆ ಸಾಕ್ಸ್ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ವಿದ್ಯಾವಿಕಾಸ ಯೋಜನೆಯ ಅಡಿ 2026-27ನೇ ಸಾಲಿಗೆ ಉಚಿತ ಶೂ, ಸಾಕ್ಸ್ ನೀಡಲು ನಿರ್ಧರಿಸಲಾಗಿದೆ.
























