ಬೆಳ್ತಂಗಡಿ: ಅಪರಿಚಿತನೊಬ್ಬ ಚಿನ್ನದ ಸರವನ್ನು ತೊಳೆಯುವ ನೆಪದಲ್ಲಿ ಕೆಮಿಕಲ್ ಬಳಸಿ ವೃದ್ಧೆಯೊಬ್ಬರ ಎರಡೂ ಮುಕ್ಕಾಲು ಪವನಿನ ಚಿನ್ನವನ್ನು ಕರಗಿಸಿ ಮೋಸ ಗೊಳಿಸಿರುವ ಘಟನೆ ಕಾಶೀಪಟ್ಣದ ಪಣಿಲಾಜೆಯಲ್ಲಿ ನಡೆದಿದೆ.
ರುಕ್ಮಿಣಿ ಶೆಟ್ಟಿಗಾರ್ (90) ಎಂಬವರೇ ವಂಚನೆಗೊಳಗಾದ ವೃದ್ಧೆ. ಈ ಸಂಬಂಧ ಅವರು ವೇಣೂರು ಪೊಲೀಸರಿಗೂ ದೂರು ನೀಡಿದ್ದಾರೆ.
ಅವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಚಿನ್ನ ತೊಳೆಯುವುದಾಗಿ ಹೇಳಿಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದಾನೆ. ಅವನ ಮಾತನ್ನು ನಂಬಿ ರುಕ್ಮಿಣಿ ಅವರು ಮನೆಯೊಳಗೆ ಭದ್ರವಾಗಿಟ್ಟಿದ್ದ ಚಿನ್ನದ ಸರವನ್ನು ನೀಡಿದ್ದಾರೆ. ಆತ ಅಂಗಳದಲ್ಲಿದ್ದ ಪಾತ್ರೆಯೊಂದರಲ್ಲಿ ನೀರು ಹಾಕಿ ಬ್ರಶ್ ಬಳಸಿ ಚಿನ್ನ ತೊಳೆಯುವ ನಾಟಕ ಮಾಡಿದ್ದಾನೆ.
ಬಳಿಕ ಅದನ್ನು ಪೇಪರಿನಲ್ಲಿ ಸುತ್ತಿ ವೃದ್ಧೆಯ ಕೈಗೆ ನೀಡಿದ್ದು, ಅದನ್ನು ಫ್ಯಾನ್ ಗಾಳಿಗೆ ಒಳಗಿಸುವಂತೆ ಹೇಳಿ ಅಲ್ಲಿಂದ ಹೋಗುತ್ತಾನೆ. ವೃದ್ಧೆ ಆ ಪೇಪರ್ ತೆರೆದಾಗ ಅದರಲ್ಲಿ ಅರಶಿನ ಪುಡಿಯಂತಹ ಯಾವುದೋ ಪುಡಿ ಇದ್ದು, ಚಿನ್ನದ ಸಣ್ಣ ಸಣ್ಣ ತುಂಡುಗಳು ಮತ್ತು ತಾಮ್ರದ ಬಣ್ಣಕ್ಕೆ ತಿರುಗಿದ ಪೆಂಡೆಂಟ್ ಕಂಡು ಬಂದಿದೆ.
ಚಿನ್ನ ತೊಳೆಯಲು ಬಂದ ಕಳ್ಳನ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
























