ಶತಮಾನೋತ್ಸವ ಅಚರಿಸಿದ ಶಾಲಾ ಮುಖ್ಯಶಿಕ್ಷಕರ ನಡೆಗೆ ಪೋಷಕರ ತೀವ್ರ ಆಕ್ರೋಶ
ಬೆಳ್ತಂಗಡಿ : ಸರಕುಗಳನ್ನು ಸಾಗಿಸುವ ಪಿಕಪ್ ವಾಹನ ಮತ್ತು ಟಿಪ್ಪರ್‌ನಲ್ಲಿ ಶಾಲಾ ಮಕ್ಕಳನ್ನು ಅಧ್ಯಯನ ಪ್ರವಾಸಕ್ಕೆ ಕರೆದುಕೊಂಡು ಹೋದ ಶಾಲೆಯ ಮುಖ್ಯಶಿಕ್ಷಕರೊಬ್ಬರ ನಡೆಗೆ ಪಾಲಕರಿಂದ ಅಕ್ರೋಶ ವ್ಯಕ್ತವಾಗಿದೆ. ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಸರಕುಗಳಂತೆ ಶಾಲಾ ಮಕ್ಕಳನ್ನು ವಾಹನಗಳಿಗೆ ತುಂಬಿಸಿ ಜೇನು ಕೃಷಿ ಅಧ್ಯಯನ ಮಾಡಲು ತೆರೆದ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಕರೆದುಕೊಂಡು ಹೋದ ಈ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳೆಂಜದ ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರ ನೇತೃತ್ವದಲ್ಲಿ ಫೆ.10ರಂದು ಬೆಳಗ್ಗೆ ಶಾಲಾ ಮಕ್ಕಳನ್ನು KA-21-A-8776 ನಂಬರಿನ ಪಿಕಪ್ ಮತ್ತು KA-70-2596 ನಂಬರಿನ ಟಿಪ್ಪರ್ ವಾಹನದಲ್ಲಿ ಜೇನು ಕೃಷಿ ಅಧ್ಯಯನದ ಹೆಸರಿನಲ್ಲಿ ಸ್ಥಳೀಯ ನಾಲ್ಕೂರು ಬಳಿಯ ಅನಿಲ್ ಫಾರ್ಮ್‌ಗೆ ಕರೆದುಕೊಂಡು ಹೋಗಿ ಬಳಿಕ ವಾಪಸ್ ಶಾಲೆಗೆ ಕರೆದುಕೊಂಡು ಬಂದಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳ ಪೋಷಕರು ಪಿಕಪ್ ಮತ್ತು ಟಿಪ್ಪರ್ ಸೇರಿದಂತೆ ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನೂ ಕರೆದುಕೊಂಡು ಹೋಗಲು ಮೋಟಾರು ಕಾಯ್ದೆ ಅಡಿಯಲ್ಲಿ ಅವಕಾಶವಿಲ್ಲದಿರುವಾಗ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿರುವುದು ಏಕೆ? ಅದಲ್ಲದೆ ಈ ರೀತಿ ಕರೆದುಕೊಂಡು ಹೋಗಿ ಶಾಲಾ ಮಕ್ಕಳಿಗೆ ಏನಾದರೂ ಅನಾಹುತ ಆಗಿದ್ದರೆ ಯಾರು ಹೊಣೆ ಎಂದು ಮುಖ್ಯೋಪಾಧ್ಯಾಯ ಕಿರಣ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಲಾ ಮಕ್ಕಳನ್ನು ಪಿಕಪ್ ಮತ್ತು ಟಿಪ್ಪರ್‌ನಲ್ಲಿ ಕರೆದುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಅಗುತ್ತಿದ್ದಂತೆ ಈ ಬಗ್ಗೆ ಪೊಲೀಸರು ಮುಖ್ಯೋಪಾಧ್ಯಾಯ ಕಿರಣ್ ಮತ್ತು ಎರಡು ವಾಹನ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
























