ಇಂದು ಭಾರತ್‌ ಬಂದ್‌ ಇದ್ದರೂ ಜನಜೀವನ ಮಾಮೂಲಿ

ಎಂದಿನಂತೆ ಓಡಾಟ ನಡೆಸಲಿರುವ ವಾಹನ, ರೈಲುಗಳು

ನವದೆಹಲಿ : ಹಲವು ಕಾರ್ಮಿಕ ಸಂಘಟನೆಗಳು ಇಂದು ಭಾರತ್ ಬಂದ್‌ಗೆ ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಬಂದ್ ನಡೆಯುತ್ತಿದ್ದು, ರಾಜ್ಯದಲ್ಲೂ ಪ್ರತಿಭಟನೆಗೆ ಕರೆ ನೀಡಲಾಗಿದೆ. ಆದರೆ ಬಂದ್‌ನಲ್ಲಿ ಸಾರಿಗೆ ಸಂಘಟನೆಗಳು ಸೇರದಿರುವುದರಿಂದ ವಾಹನಗಳ ಓಡಾಟ ಎಂದಿನಂತಿದೆ.

ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯೂಎ, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಸೇರಿದಂತೆ 10 ಕೇಂದ್ರ ಕಾರ್ಮಿಕ ಸಂಘಗಳು ಪ್ರತಿಭಟನೆ ನಡೆಸುತ್ತಿವೆ. ಈ ಕಾರ್ಮಿಕ ರೈತ ಸಂಘಟನೆಗಳಿಗೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್ ಸಭಾ ಸಂಪೂರ್ಣ ಬೆಂಬಲ ನೀಡಿವೆ. ಭಾರತ್ ಬಂದ್‌ಗೆ ಕರೆ ನೀಡಿದ್ರೂ ರಾಜ್ಯದಲ್ಲಿ ಬಹುತೇಕ ಸೇವೆಗಳು ಸಿಗಲಿದ್ದು, ಎಂದಿನಂತೆ ಎಲ್ಲವೂ ಸಹಜವಾಗಿಯೇ ಇರಲಿದೆ.





















































 
 

ಬಸ್, ರೈಲು, ಆಟೋ, ಕ್ಯಾಬ್, ಮೆಟ್ರೋ, ಅಂಗಡಿ ಮುಂಗಟ್ಟು, ಶಾಲೆ-ಕಾಲೇಜು ಎಲ್ಲವೂ ಎಂದಿನಂತೆ ಕಾರ್ಯಾಚರಿಸಲಿರುವುದರಿಂದ ಜನಸಾಮಾನ್ಯರಿಗೆ ಬಂದ್‌ ಬಿಸಿ ತಟ್ಟುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಬ್ಯಾಂಕ್‌ ಯೂನಿಯನ್‌ಗಳು ಮುಷ್ಕರದಲ್ಲಿ ಸೇರಿರುವುದರಿಂದ ಬ್ಯಾಂಕ್‌ ಸೇವೆಗಳಲ್ಲಿ ತುಸು ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆಗೆ ಕಾರ್ಮಿಕ ಸಂಘಟನೆಗಳು ಪ್ಲಾನ್ ಮಾಡಿವೆ. ಇಂದು ಬೆಳ್ಳಿಗ್ಗೆ 11 ಗಂಟೆಗೆ ಟೌನ್ ಹಾಲ್‌ನಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಯಲಿದೆ.

ಪ್ರಮುಖ ಬೇಡಿಕೆಗಳು

ಕೇಂದ್ರ ಸರ್ಕಾರದ 4 ಕಾರ್ಮಿಕ ಸಂಹಿತೆ ರದ್ದಾಗಬೇಕು, ನರೇಗಾ ಯೋಜನೆ ಪುನರ್ ಸ್ಥಾಪನೆ, ವಿಜಿ ರಾಮ್ ಜಿ ಕಾಯ್ದೆ ರದ್ದು, ಭೂಸ್ವಾಧೀನ ಕಾಯ್ದೆ, ಬೀಜ ಮಸೂದೆ ಕಾಯ್ದೆ ಹಿಂಪಡೆಯಬೇಕು, ವಿದ್ಯುತ್ ಖಾಸಗೀಕರಣ ಬೇಡ, ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಬೇಕು.

ಹೀಗೆ 9 ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕನಿಷ್ಟ ವೇತನ ಪರಿಷ್ಕ್ರರಣೆಯಾಗಬೇಕೆಂಬ ಪ್ರಮುಖ ಬೇಡಿಕೆ ಇಡಲಾಗಿದೆ. ಮುಷ್ಕರವನ್ನು ಬೆಂಗಳೂರು ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಕೂಡಾ ಬೆಂಬಲಿಸಿದೆ. ಆಟೋ, ಟ್ಯಾಕ್ಸಿ ಹಾಗೂ ಸಾರಿಗೆ ಚಾಲಕರ ಸಂಘಟನೆ ಮುಷ್ಕರಕ್ಕೆ ಕರೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆ ಇಟ್ಟಿದೆ. ಆದರೆ ಇವತ್ತು ಆಟೋ ಬಂದ್ ಇರೋದಿಲ್ಲ. ಆಟೋ ಚಾಲಕರು ಕೇವಲ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

error: Content is protected !!
Scroll to Top