ಕ್ಷುಲ್ಲಕ ಕಾರಣಕ್ಕೆ ಅಪ್ಪ-ಅಮ್ಮನನ್ನು ಚಾಕುವಿನಿಂದ ಇರಿದು ಕೊಂದ ಟೆಕ್ಕಿ ಪುತ್ರ
ಬೆಂಗಳೂರು : ಟೆಕ್ಕಿ ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನವೀನ್ ಚಂದ್ರ ಭಟ್(60) ಮತ್ತು ಡಾ.ಶ್ಯಾಮಲಾ ಭಟ್(55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಆಗಿದ್ದರೆ, ಡಾ.ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು. ಕೌಟುಂಬಿಕ ವಿಚಾರಕ್ಕೆ ಪುತ್ರ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರೋಹನ್ ಭಟ್(33) ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದ್ದು, ಅವನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.
ತಂದೆ ನವೀನ್ ಚಂದ್ರ ಭಟ್(60) ಹಾಗೂ ತಾಯಿ ಡಾ.ಶ್ಯಾಮಲಾ ಭಟ್(55) ಜೊತೆ ಪುತ್ರ ರೋಹನ್ ಭಟ್ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ. ಕೌಟುಂಬಿಕ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದ್ದು, ಕೋಪದಲ್ಲಿ ತಂದೆ ತಾಯಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಬಳಿಕ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹಣಕಾಸಿನ ವಿಚಾರವಾಗಿ ಹತ್ಯೆಯಾಗಿರಬಹುದು ಎಂದು ಶಂಕಿಸಲಾಗಿದೆ.
ಮೃತ ದಂಪತಿಯ ಪುತ್ರಿ ಅಮೆರಿಕದಲ್ಲಿದ್ದು, ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.
























