ದಾವಣಗೆರೆ: ಮಗಳು ಶಾಲೆಗೆ ಹೋಗದಂತೆ ತಡೆಯಲು ಕುಡುಕ ತಂದೆಯೊಬ್ಬ ಅವಳ ಪುಸ್ತಕಗಳನ್ನೆಲ್ಲಾ ಸುಟ್ಟು ಹಾಕಿದ್ದು, ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡಿದ ಘಟನೆ ನ್ಯಾಮತಿ ತಾಲೂಕಿನ ಆರುಂಡಿಯಲ್ಲಿ ನಡೆದಿದೆ.
ಹುಡುಗಿ 10 ನೇ ತರಗತಿಯಲ್ಲಿ ಕಲಿಯುತ್ತಿದ್ದು ಶಾಲೆಗೆ ಹೋಗದಂತೆ ಆಕೆಗೆ ತಂದೆಯೇ ಗದರಿದ್ದಾನೆ. ಜೊತೆಗೆ ಆಕೆಯ ಶಾಲೆಯ ಬ್ಯಾಗ್ನಲ್ಲಿದ್ದ ಪುಸ್ತಕಗಳನ್ನು ಸುಟ್ಟು ಹಾಕಿದ್ದಾನೆ. ಈ ವೇಳೆ ಶಾಲೆಗೆ ಹೋಗಲೇ ಬೇಕು ಎಂದು ಹಠ ಹಿಡಿದ ಮಗಳು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾಳೆ.
ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಕುಡುಕ ತಂದೆಗೆ ಗದರಿ, ಬುದ್ಧಿ ಹೇಳಿದ್ದಾರೆ. ಹಾಗೆಯೇ ಆಕೆಗೆ ಮತ್ತೆ ಪುಸ್ತಕ ಮತ್ತು ಶಾಲೆಗೆ ಬೇಕಾದ ಇತರ ವಸ್ತುಗಳನ್ನು ತ ದು ಕೊಡುವಂತೆ ಸೂಚಿಸಿದ್ದಾರೆ. ಶಾಲೆಯ ಶಿಕ್ಷಕರಿಗೂ ಆಕೆಯ ಓದಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಗಮನ ನೀಡುವಂತೆ ಸೂಚಿಸಿದ್ದಾರೆ.
























