ಬೆಳ್ತಂಗಡಿ: ಮೂವರು ದುಷ್ಕರ್ಮಿಗಳಿಂದ ಕಾಲೇಜು ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ ಎನ್ನುವ ಸುದ್ದಿಗೆ ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿನಿಯೇ ತನ್ನ ಕೈಗೆ ಬ್ಲೇಡಿನಿಂದ ಗೀರಿಕೊಂಡು ಅಪಹರಣದ ಕಥೆ ಕಟ್ಟಿದ್ದಳು ಎನ್ನುವ ಸತ್ಯಾಂಶ ಪೊಲೀಸರ ತನಿಖೆಯ ವೇಳೆ ಬಯಲಾಗಿದೆ.
ಮೂವರು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಪಹರಣಕ್ಕೆ ಯತ್ನಿಸಿ, ತನ್ನ ಕೈಗೆ ಚಾಕು ಚುಚ್ಚಿ ಪರಾರಿಯಾದರು ಎಂದು ಯುವತಿ ಹೇಳಿದ್ದಳು. ಆದರೆ ಆಕೆ ಹೇಳಿದಂತ ಯಾವ ಘಟನೆಯೂ ಸ್ಥಳದಲ್ಲಿ ನಡೆದಂತೆ ಇರಲಿಲ್ಲ. ಪೊಲೀಸರು ಸಹ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸಿಸಿಟಿವಿ ಪರಿಶೀಲನೆ ಸೇರಿದಂತೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಕೊನೆಗೆ ಯುವತಿಯನ್ನೇ ವಿಚಾರಣೆ ಮಾಡಿದ್ದು, ಈ ವೇಳೆ ಆಕೆ ತಬ್ಬಿಬ್ಬಾಗಿದ್ದಾಳೆ.
ವಿದ್ಯಾರ್ಥಿನಿಯನ್ನು ಈ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳಿದ ಪೊಲೀಸರಿಗೆ ಈ ಘಟನೆ ಸುಳ್ಳು. ಆಕೆ ಬೇರೆ ಕಾಲೇಜಿಗೆ ಸೇರುವ ಆಸೆಯಿಂದ ಈ ರೀತಿಯ ನಾಟಕವಾಡಿದ್ದಾಳೆ. ತನ್ನ ಪುಸ್ತಕಗಳನ್ನೆಲ್ಲಾ ಮನೆಯ ಸಮೀಪವೇ ಸುಟ್ಟು ಹಾಕಿ ಬಂದಿದ್ದ ಅವಳು, ರಸ್ತೆಯ ನಡುವೆ ಯಾರೋ ತನ್ನನ್ನು ಅಪಹರಿಸಲು ಯತ್ನಿಸಿದ್ದು, ಕೈಗೆ ಚಾಕು ಚುಚ್ಚಿ ಪರಾರಿಯಾದ ಕಥೆ ಕಟ್ಟಿದ್ದಾಳೆ. ತನ್ನ ಕೈಗೆ ತಾನೇ ಚಾಕು ಚುಚ್ಚಿ ಗಾಯ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಹೇಳಿದ್ದಾಳೆ.
ಒಟ್ಟಿನಲ್ಲಿ ಇಡೀ ಸಮಾಜದ ಭದ್ರತೆಯ ಬಗ್ಗೆ ಪ್ರಶ್ನೆ ಮಾಡಿದ್ದ ಈ ಪ್ರಕರಣದ ರೂವಾರಿ ಅದೇ ಯುವತಿ ಎನ್ನುವ ಅಂಶ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದ್ದು, ಈ ಘಟನೆ ನಿಜವಾಗಿಯೂ ಇಂತಹ ಘಟನೆ ನಡೆದಾಗಲೂ ಸಂದೇಹದ ದೃಷ್ಟಿಯಿಂದ ನೋಡುವಂತೆ ಮಾಡಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
























