ಕಾಸರಗೋಡು: ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್, ಕಾಸರಗೋಡಿನ ಅಡೂರು ಮೂಲದ ಚಿನ್ನು ನಾನು ಖ್ಯಾತಿಯ ರೇಷ್ಮಾ(24) ಅವರು ಉಳಿಯತ್ತಡ್ಕದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೇಷ್ಮಾ ಅವರಿಗೆ ಒಂದು ಮಗುವೂ ಇದ್ದು, ಇತ್ತೀಚೆಗಷ್ಟೇ ಪತಿಯಿಂದ ವಿಚ್ಛೇದನ ಪಡೆದಿದ್ದರು. ಕಾಸರಗೋಡು ಮಲೆಯಾಳಂ, ತುಳು ಮೂಲಕವೇ ರೀಲ್ಸ್ ಮಾಡಿ ಜನಪ್ರಿಯರಾಗಿದ್ದ ರೇಷ್ಮಾ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಕರಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ, ಆ ಸಮಯಕ್ಕೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರೇಷ್ಮಾ ಅವರ ಸಾವಿನ ಕಾರಣ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























