ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆತ್ನಿಸಿದಾಗ ಬೇರ್ಪಟ್ಟ ರುಂಡ
ಉಡುಪಿ : ನಿವೃತ್ತಿಯ ಅಂಚಿನಲ್ಲಿ ಇರುವ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆಯೇ ಅವರ ರುಂಡ ಬೇರ್ಪಟ್ಟು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉಡುಪಿಯಲ್ಲಿ ನಡೆದಿದೆ.
ನಗರದ ಅಂಬಾಗಿಲು ವಾರ್ಡ್‌ನ ಕಕ್ಕುಂಜೆ ಪ್ರದೇಶದಲ್ಲಿ ಶನಿವಾರ ತಡರಾತ್ರಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಅವರ ರುಂಡ ಬೇರ್ಪಟ್ಟಿದೆ. ಮೃತರನ್ನು ಪುರುಷೋತ್ತಮ ನಾಯಕ್ (52) ಎಂದು ಗುರುತಿಸಲಾಗಿದೆ. ಮೃತ ಪುರುಷೋತ್ತಮ ನಾಯಕ್ ಅವರು ತಮ್ಮ ಮನೆಯ ಬಾವಿಯಲ್ಲಿ ಹಗ್ಗದಿಂದ ನೇಣು ಹಾಕಿಕೊಂಡಿದ್ದಾರೆ. ಈ ವೇಳೆ ರುಂಡ ಬೇರ್ಪಟ್ಟ ಪರಿಣಾಮ ಬಾವಿಯ ನೀರು ಕೆಂಪು ಬಣ್ಣಕ್ಕೆ ತಿರುಗಿದೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇವರು ಅರ್ಚಕ ವಾಸುದೇವ ನಾಯಕ್ ಅವರ ದ್ವಿತೀಯ ಪುತ್ರರಾಗಿದ್ದಾರೆ. ಮೃತರು ಮಣಿಪಾಲದ ವ್ಯಾಲಿವ್ಯೂ ಹೊಟೇಲ್ನಲ್ಲಿ ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ನಿವೃತ್ತಿ ಅಂಚಿನಲ್ಲಿದ್ದ ಅವರು ಆರ್ಥಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
























