ಹೋಟೆಲ್‌ನಲ್ಲಿ ತಾಸುಗಟ್ಟಲೆ ಕುಳಿತರೆ ಬರುತ್ತದೆ ಹೆಚ್ಚುವರಿ ಬಿಲ್‌!

ಸಣ್ಣ ಪುಟ್ಟ ಮೀಟಿಂಗ್‌ಗಳನ್ನು ಹೋಟೆಲ್‌ನಲ್ಲೇ ಮುಗಿಸುವವರಿಂದ ಟೇಬಲ್‌ ಚಾರ್ಜ್‌ ವಸೂಲು ಮಾಡಲು ಚಿಂತನೆ

ಬೆಂಗಳೂರು : ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ ಹೋಟೆಲ್‌ಗಳು ಹೊಟ್ಟೆ ಹಸಿವು ತಣಿಸುವ ಕಾಫಿ- ತಿಂಡಿ ಸವಿಯುವ ಜಾಗಗಳಾಗಿ ಉಳಿಯದೆ ಮೀಟಿಂಗ್ ಸ್ಪಾಟ್‌ಗಳಾಗುತ್ತಿವೆ. ಕೆಲವರು ಅರ್ಧರ್ಧ ಕಾಫಿ ಹಿಡಿದುಕೊಂಡು ಮಾತಾಡುತ್ತಾ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ಗ್ರಾಹಕರು ಹಾಗೂ ಹೋಟೆಲ್ ಮಾಲೀಕರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ʼಟೇಬಲ್‌ ಚಾರ್ಜ್ʼ ವಸೂಲು ಮಾಡುವ ಬಗ್ಗೆ ಚರ್ಚೆ ನಡೆದಿದೆ.

ಇತ್ತೀಚೆಗೆ ಬೆಂಗಳೂರಿನ ಹೋಟೆಲ್‌ವೊಂದರ ಗೋಡೆಯ ಮೇಲೆ ಇಲ್ಲಿ ಯಾವುದೇ ಮೀಟಿಂಗ್‌ಗಳಿಗೆ ಅವಕಾಶವಿಲ್ಲ. ಒಂದು ವೇಳೆ 1 ಗಂಟೆಗಿಂತ ಹೆಚ್ಚು ಮೀಟಿಂಗ್ ನಡೆದರೆ ಪ್ರತಿ ಗಂಟೆಗೆ 1,000 ರೂ. ಶುಲ್ಕ ವಿಧಿಸಲಾಗುವುದು ಅಂತ ಬರೆಯಲಾಗಿತ್ತು. ಈ ನೋಟಿಸ್ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಹೋಟೆಲ್‌ನಲ್ಲಿ ನಡೆಯುವ ಮೀಟಿಂಗ್ ಸಮಯದ ಬಗ್ಗೆ ಸಾಕಷ್ಟು ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ.





















































 
 

ಬೆಂಗಳೂರು ನಗರದಲ್ಲಿ 5 ಸ್ಟಾರ್, 3 ಸ್ಟಾರ್ ಸಾಮಾನ್ಯ ಹೋಟೆಲ್‌ಗಳು ಸೇರಿದಂತೆ ಸುಮಾರು 35 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಸಣ್ಣ ಹಾಗೂ ಮಧ್ಯಮವರ್ಗದ ಹೋಟೆಲ್‌ಗಳು ಕೇವಲ ಊಟ-ಉಪಹಾರ ತಿನ್ನುವ ತಾಣಗಳಾಗದೆ ಮೀಟಿಂಗ್ ಸ್ಪಾಟ್‌ಗಳಾಗುತ್ತಿವೆ. ಇಲ್ಲಿ ರಾಜಕೀಯ, ಭೂವ್ಯವಹಾರ, ರಿಯಲ್ ಎಸ್ಟೇಟ್, ಮದುವೆ, ಆಫೀಸ್ ವಿಷಯಗಳು ಸೇರಿದಂತೆ ಹಲವು ಚರ್ಚೆಗಳು ನಡೆಯುತ್ತವೆ. ಈ ವೇಳೆ ಮಾತನಾಡುತ್ತಾ ಗ್ರಾಹಕರು ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಇದರಿಂದ ನಂತರ ಬರುವ ಗ್ರಾಹಕರು ಹಾಗೂ ಹೋಟೆಲ್‌ನವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಪೀಕ್ ಅವರ್‌ಗಳಲ್ಲಿ ಬರುವ ಗ್ರಾಹಕರಿಗೆ ಕೂರಲು ಜಾಗವಿಲ್ಲದೆ ಅವರು ವಾಪಸ್ ಹೋಗುತ್ತಾರೆ ಅಂತಿದ್ದಾರೆ ಹೋಟೆಲ್‌ನವರು.

ಈ ಬಗ್ಗೆ ಬೃಹತ್ ಬೆಂಗಳೂರು ಹೋಟೆಲ್ ಸಂಘಕ್ಕೆ ಹಲವು ಹೋಟೆಲ್ ಮಾಲೀಕರು ದೂರು ನೀಡಿದ್ದಾರೆ. ಜೊತೆಗೆ 5 ಸ್ಟಾರ್ ಹೋಟೆಲ್‌ಗಳ ಲಾಬಿಯಲ್ಲಿ ಕುಳಿತರೆ ಗಂಟೆಗೆ ಸಾವಿರ ರೂ. ಹಾಗೂ ತಿನ್ನಲು ಆರ್ಡರ್ ಮಾಡಬೇಕು. ಅದರಂತೆ ಬೆಂಗಳೂರಿನ ಎಲ್ಲ ಹೋಟೆಲ್‌ಗಳಲ್ಲಿ ಪಾರ್ಕಿಂಗ್ ಚಾರ್ಜ್‌ನಂತೆ ಟೇಬಲ್ ಚಾರ್ಜ್ ಹಾಕಲು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ನಗರದ ಸಣ್ಣ, ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ ಟೀ, ಕಾಫಿ, ಉಪಹಾರ ಹಾಗೂ ಊಟಕ್ಕೆ ಇಂತಿಷ್ಟು ಸಮಯ ನಿಗದಿಪಡಿಸಿ ಟೇಬಲ್ ಚಾರ್ಜ್ ಅಳವಡಿಸುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸಂಘ ತಿಳಿಸಿದೆ.

error: Content is protected !!
Scroll to Top