ಅತ್ಯಾಚಾರ ಎಸಗಿ ಕೊಲೆ : ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌

ಮಂಗಳೂರಿನ ವಾಮಂಜೂರಿನಲ್ಲಿ 5 ವರ್ಷದ ಹಿಂದೆ ನಡೆದಿದ್ದ ಪೈಶಾಚಿಕ ಕೃತ್ಯ

ಬೆಂಗಳೂರು: ಐದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸಿದೆ. ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೆ, ಕತ್ತು ಹಿಸುಕಿ ಕೊಲೆ ಮಾಡಿದ ಅಪರಾಧಿಗಳ ಶಿಕ್ಷೆ ಪ್ರಮಾಣ ಕಡಿಮೆ ಮಾಡಿದಲ್ಲಿ ಅಂತಹ ಕೃತ್ಯಗಳನ್ನು ಪ್ರೋತ್ಸಾಹಿಸಿದಂತಾಗಲಿದ್ದು, ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಕಾಯಂಗೊಳಿಸಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ, ಶಿಕ್ಷೆ ರದ್ದು ಕೋರಿ ಅಪರಾಧಿಗಳಾದ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜೈಬನ್‌ ಆದಿವಾಸಿ ಅಲಿಯಾಸ್‌ ಜಯಸಿಂಗ್‌ ಮುಖೇಶ್‌ ಸಿಂಗ್‌, ಮುಖೇಶ್‌ ಸಿಂಗ್‌ ತಿರ್ಕಿ ಮತ್ತು ಜಾರ್ಖಂಡ್‌ನ ರಾಂಚಿಯ ಮನೀಶ್‌ ತಿರ್ಕಿ ಎಂಬುವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಮತ್ತು ನ್ಯಾಯಮೂರ್ತಿ ವೆಂಟಕೇಶ್‌ ಟಿ.ನಾಯ್ಕ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.





















































 
 

ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌, ದಾಖಲೆಗಳನ್ನು ಪರಿಶೀಲಿಸಿದ ನಂತರ ವಿಚಾರಣಾ ನ್ಯಾಯಾಲಯ ವಿಧಿಸಿರುವ ಗಲ್ಲುಶಿಕ್ಷೆ ಕಾಯಂಗೊಳಿಸಿ, ಶಿಕ್ಷೆ ರದ್ದು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಅಪರಾಧಿಗಳು ಅಪ್ರಾಪ್ತೆಯ ಜೀವವನ್ನು ಲೆಕ್ಕಿಸದೆ ನಿರಂತರವಾಗಿ ಒಬ್ಬರ ಬಳಿಕ ಮತ್ತೊಬ್ಬರು ಅತ್ಯಾಚಾರವೆಸಗಿದ್ದು, ಇದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘೋರ ಅಪರಾಧ ಕೃತ್ಯವಾಗಿದೆ.
ಅಂತಹ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದರೆ, ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗಲಿದೆ. ಬಾಲಕಿಯನ್ನು ಕಾಮುಕ ಕೃತ್ಯಕ್ಕೆ ಬಳಸಿರುವುದನ್ನು ಪ್ರೋತ್ಸಾಹಿಸಿದಂತಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅಪರಾಧಿಗಳಿಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ಕಾಯಂಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಸಂತ್ರಸ್ತೆಗೆ 7 ವರ್ಷ ಏಳು ತಿಂಗಳಾಗಿತ್ತು. ಆಕೆ ಆರೋಪಿಗಳ ಮೇಲೆ ನಂಬಿಕೆ ಇಟ್ಟಿದ್ದಳು. ಅದೇ ಕಾರಣದಿಂದ ಆಕೆಗೆ ತಿಂಡಿ ಕೊಡಿಸುವ ನೆಪದಲ್ಲಿ ಕರೆದೊಯ್ದು ಅಪ್ರಾಪ್ತೆಯ ಜೀವವನ್ನು ಲೆಕ್ಕಿಸದೆ, ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸಂತ್ರಸ್ತೆಯ ಮೃತದೇಹವನ್ನು ಚರಂಡಿಗೆ ಎಸೆದಿದ್ದಾರೆ. ಈ ಘಟನೆ ಕೇವಲ ನ್ಯಾಯಾಂಗದ ಅತ್ಮಸಾಕ್ಷಿಗೆ ಮಾತ್ರವಲ್ಲದೆ, ಇಡೀ ಸಮಾಜದ ಆತ್ಮಸಾಕ್ಷಿಗೆ ಆಘಾತನ್ನುಂಟು ಮಾಡಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ

ಮಂಗಳೂರಿನ ವಾಮಂಜೂರು ಬಳಿಯ ಟೈಲ್ಸ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ಅಪರಾಧಿಗಳು, ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪುತ್ರಿಯನ್ನು 2021ರ ನವೆಂಬರ್ 21ರಂದು, ಚಿಕ್ಕಿ ಕೊಡಿಸುವುದಾಗಿ ನಂಬಿಸಿ ತಮ್ಮ ಕೊಠಡಿಗೆ ಕರೆದೊಯ್ದಿದ್ದರು. ಒಬ್ಬ ಅರೋಪಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದರೆ, ಇನ್ನಿಬ್ಬರು ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯ ಕುತ್ತಿಗೆ ಹಿಸುಕಿ ಕೊಂದು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಚರಂಡಿಗೆ ಎಸೆದಿದ್ದರು. ಮೃತದೇಹ ಪತ್ತೆಯಾದ ಬಳಿಕ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗಳಿಗೆ ಗಲ್ಲು ಶಿಕ್ಷೆ ಜತೆಗೆ ತಲಾ 40 ಸಾವಿರ ರೂ. ದಂಡ ವಿಧಿಸಿತ್ತು.

error: Content is protected !!
Scroll to Top