ಮಂಗಳೂರು : ಕಾರಿನಲ್ಲಿ ಗಾಂಜಾ ತುಂಬಿಸಿಕೊಂಡು ಮಾರಾಟ ಮಾಡಲು ತೆರಳುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಮುಡಿಪು ಬಳಿ ಬಂಧಿಸಿ ಅಪಾರ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನೌಶಾದ್ ಮತ್ತು ಇಬ್ರಾಹಿಂ ಎಂದು ಗುರುತಿಸಲಾಗಿದೆ.
ಆರೋಪಿಗಳು ಮೇಲ್ಕಾರ್ – ಸಜೀಪ – ಬೋಳಿಯಾರು ಮಾರ್ಗವಾಗಿ ಗಾಂಜಾದ ಕಟ್ಟುಗಳನ್ನು ತೆಗೆದುಕೊಂಡು ಮುಡಿಪು ಮತ್ತು ಕೇರಳ ರಾಜ್ಯಕ್ಕೆ ಮಾರಾಟ ಮಾಡಲು ತರುತ್ತಿದ್ದಾರೆಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿದ್ದಾರೆ.
ಆರೋಪಿಗಳು ಪರಾರಿಗೆ ಯತ್ನಿಸಿದಾಗ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರ ಬಳಿ ಇದ್ದ ಸುಮಾರು 80 ಕೆಜಿ ಗಾಂಜಾ ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು, 3 ಮೊಬೈಲ್ ಫೋನ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
























