ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಕ್ಷೇತ್ರದ ಪಾವಿತ್ರ್ಯ ಹಾಳು ಮಾಡಲಾಗಿದೆ ಎಂದ ಸಿಎಂ
ಹೈದರಾಬಾದ್ : ಜಗತ್ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಲಡ್ಡು ವಿವಾದ ಇನ್ನೂ ಮುಗಿದಿಲ್ಲ. ಸ್ನಾನಗೃಹ, ಶೌಚಗೃಹ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕ ಕಲಬೆರಕೆ ಮಾಡಿರುವ ತುಪ್ಪದಿಂದ ತಿರುಪತಿ ಲಡ್ಡು ತಯಾರಿಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಸಭಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದಿನ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಲಡ್ಡುಗಳಲ್ಲಿ ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್‌ಗಳಿಂದ ತಯಾರಿಸಿದ ತುಪ್ಪ ಬಳಸಲಾಗುತ್ತಿತ್ತು. ಆ ಮೂಲಕ ತಿರುಮಲ ದೇವಸ್ಥಾನದ ಪ್ರಸಾದದ ಪಾವಿತ್ರ್ಯ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿಯ ಘನತೆಯನ್ನು ಹಾಳು ಮಾಡಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.
ಸುಮಾರು 5 ವರ್ಷಗಳ ಕಾಲ ಇದೇ ರೀತಿ ಮೋಸ ಮಾಡಿದ್ದಾರೆ. ತುಪ್ಪದ ಕಲಬೆರಕೆಯು ದೇವರ ವಿರುದ್ಧ ಮಾಡಿದ ಮಹಾಪಾಪ. ಈ ಪ್ರಕರಣದಲ್ಲಿ ಶಾಮೀಲಾದ ಯಾರನ್ನೂ ನಾನು ಸುಮ್ಮನೆ ಬಿಡಲ್ಲ ಎಂದು ನಾಯ್ಡು ಗುಡುಗಿದ್ದಾರೆ.
ಲಡ್ಡು ತಯಾರಿಕೆಯಲ್ಲಿ ರಾಸಾಯನಿಕ ಬೆರೆಸಿದ ತುಪ್ಪವನ್ನು ಬಳಸಲಾಗಿದೆ. ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಸುಮಾರು ಐದು ವರ್ಷಗಳ ಕಾಲ ಈ ರೀತಿ ಮಾಡಲಾಗಿತ್ತು. ಅದೇ ಅವಧಿಯಲ್ಲಿ ಶ್ರೀಶೈಲಂ ದೇವಸ್ಥಾನಕ್ಕೂ ಇದೇ ರೀತಿಯ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು. ತರಕಾರಿ ಆಧಾರಿತ ಉತ್ಪನ್ನಗಳು ಹೆಚ್ಚು ದುಬಾರಿಯಾಗಿದ್ದು, ಪ್ರಾಣಿಗಳ ಕೊಬ್ಬು ಅಗ್ಗವಾಗಿರುವುದರಿಂದ ಹಾಗೆ ಮಾಡಿರಬಹುದು ಎಂದು ಅವರು ನಾಯ್ಡು ಹೇಳಿದ್ದಾರೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ವರದಿಯನ್ನು ಅವರು ಉಲ್ಲೇಖಿಸಿದ ಅವರು, ಪ್ರಾಣಿಗಳ ಕೊಬ್ಬಿನ ಅಂಶ ಇದ್ದುದು ವರದಿಯಿಂದ ತಿಳಿದುಬಂದಿದೆ ಎಂದಿದ್ದಾರೆ.
ಚಂದ್ರಬಾಬು ನಾಯ್ಡು ಆರೋಪಗಳಿಗೆ ಪ್ರತಿಕ್ರಿಯಿಸಿರುವ ಜಗನ್ ಮೋಹನ್ ರೆಡ್ಡಿ, ಈಗ ಸಮ್ಮಿಶ್ರ ಸರ್ಕಾರದ ಜಂಗಲ್ ರಾಜ್ ನಡೆಯುತ್ತಿದೆ. ತಿರುಮಲ ಲಡ್ಡು ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲವನ್ನು ಬಯಲಿಗೆಳೆಯುತ್ತೇವೆ ಎಂದು ಶಪಥಗೈದಿದ್ದಾರೆ.
























